ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರ ನಡೆದ ಪಂದ್ಯ ಹೈಸ್ಕೋರಿಂಗ್ ಕದನಕ್ಕೆ ಸಾಕ್ಷಿಯಾಯಿತು. ಚೆನ್ನೈ ಹಾಗೂ ಬೆಂಗಳೂರು ನಡುವೆ ಯಾವಾಗಲೂ ರೋಚಕ ಹಣಾಹಣಿ ಏರ್ಪಡುತ್ತದೆ. ಮಂಗಳವಾರದ ಪಂದ್ಯ ಕೂಡ ಅದಕ್ಕೆ ಹೊರತಾಗಿರಲಿಲ್ಲ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಫಾಫ್ ಡು ಪ್ಲೆಸಿಸ್ ಬಳಗಕ್ಕೆ ನಿರೀಕ್ಷೆಯಂತೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮಾಜಿ ಆರ್ಸಿಬಿ ಆಟಗಾರರಾದ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ 4 ವಿಕೆಟ್ ನಷ್ಟಕ್ಕೆ 216 ರನ್ ಪೇರಿಸಿತ್ತು. ಆರ್ಸಿಬಿ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವಿದ್ದರೂ ದೊಡ್ಡ ಜತೆಯಾಟ ಮೂಡಿಬರದ ಕಾರಣ ಸೋಲಬೇಕಾಯಿತು. ಸಿಎಸ್ಕೆ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತುಂಬುವಂತೆ ಅಂಬಾಟಿ ರಾಯುಡು ಹಿಡಿದ ಕ್ಯಾಚ್ ಒಂದು ಸಖತ್ ಸುದ್ದಿಯಾಗಿದೆ.
16ನೇ ಓವರ್ನಲ್ಲಿ 9ನೇ ಕ್ರಮಾಂಕದಲ್ಲಿ ಆಡಲಿಳಿದ ಆಕಾಶ್ ದೀಪ್ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಗುಡ್ ಲೆಂತ್ ಬಾಲ್ ಎಸೆದರು. ಆಕಾಶ್ ದೀಪ್ ಅದನ್ನು ತುಸುವೇ ಮುಂದಕ್ಕೆ ಹೊಡೆದರು. ಶಾರ್ಟ್ ಕವರ್ನಲ್ಲಿದ್ದ ಅಂಬಾಟಿ ರಾಯುಡು ತಮ್ಮ ಇಡೀ ದೇಹವನ್ನು ಬಾಗಿಸಿ ಮುಂದಕ್ಕೆ ಜಿಗಿದು ಅದ್ಭುತ ಕ್ಯಾಚ್ ಪಡೆದರು. ಈ ಅದ್ಭುತ ಕ್ಯಾಚ್ಗೆ ಒಂದು ಕ್ಷಣ ಎಲ್ಲರೂ ಅವಾಕ್ಕಾದರು.