ಸಕಲೇಶಪುರ : ಮಂಗಳೂರು – ಬೆಂಗಳೂರು ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿಯ ದೋಣಿಗಲ್ ನಲ್ಲಿ ಶುಕ್ರವಾರ ರಸ್ತೆ ಕುಸಿದಿದ್ದು, , ಸಂಚಾರಕ್ಕೆ ತೊಡಕಾಗಿದೆ. ಹೀಗಾಗಿ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ.
ದೋಣಿಗಲ್ ನಲ್ಲಿ ಶುಕ್ರವಾರ ಮಧ್ಯಾಹ್ನ ರಸ್ತೆ ಕುಸಿದಿದ್ದು, ಬಿಸಲೆ ಘಾಟಿಗೆ ಹೋಗುವಂತಹ ರಸ್ತೆಯ ಪಕ್ಕದಲ್ಲಿದ್ದಂತಹ ಮಣ್ಣು ಕುಸಿದು ರಸ್ತೆ ಮೇಲೆ ಬಂದಿದೆ. ಹಾಗಾಗಿ ಆ ಭಾಗದಲ್ಲಿ ಓಡಾಡುವಂತಹ ವಾಹನಗಳನ್ನ ಹಾಸನದ ಎಸ್ ಪಿ ಅವರು ತಡೆದಿದ್ದು, ಈಗ ಕುಸಿತಕ್ಕೊಳಗಾದ ಭಾಗದಲ್ಲಿ ಸ್ಯಾಂಡ್ ಬ್ಯಾಗ್ ಹಾಕಿ ಮಣ್ಣು ಜರಿಯುವುದನ್ನು ತಡೆಯುವ ಯತ್ನ ಮಾಡಲಾಗುತ್ತಿದೆ. ಸಂಚಾರ ಪೂರ್ತಿಯಾಗಿ ನಿಲ್ಲಿಸಲಾಗಿದೆ.
ಪರಿಣಾಮ ಮಂಗಳೂರಿಗೆ ಹೋಗುವ ಎಲ್ಲಾ ವಾಹನಗಳು ಬೇಲೂರು ಮೂಡಿಗೆರೆ ಮಾರ್ಗವಾಗಿ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಚಲಿಸಬೇಕು ಎಂದು ಹಾಸನ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಕೊಟ್ಟಿಗೆಹಾರ, ಮೂಡಿಗೆರೆ, ಹಾನ್ಬಾಲ್, ಬೇಲೂರು, ಹಾಸನ ಮಾರ್ಗವಾಗಿ ಬೆಂಗಳೂರು ಸಂಚಾರ ಮಾಡುವುದಕ್ಕೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಚಾರ್ಮಾಡಿ ಘಾಟ್ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ಚಾರ್ಮಾಡಿ ಘಾಟ್ ನ ಸೋಮನ ಕಾಡು ಸಮೀಪ ಲಘು ಭೂಕುಸಿತವಾಗಿದ್ದು ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೆದ್ದಾರಿ ಪ್ರಾಧಿಕಾರದ ಜೆಸಿಬಿ ಯಂತ್ರಗಳು ಮಣ್ಣು ತೆರವು ಕಾರ್ಯದಲ್ಲಿ ನಿರಂತರವಾಗಿ ಚಾರ್ಮಾಡಿ ಘಾಟ್ ನಲ್ಲಿ ಕೆಲಸ ನಿರ್ವಹಿಸುತ್ತಿವೆ.