ಉಡುಪಿ: ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರು ರಾದ್ಧಾಂತ ಮಾಡಿದ ಘಟನೆ ಮಣಿಪಾಲದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಉಡುಪಿಯ ಮಿಷನ್ ಕಾಂಪೌಂಡ್ ನಲ್ಲಿ ವಾಸವಿರುವ ಈ ದಂಪತಿ ಉಡುಪಿಯಲ್ಲಿ ಮದ್ಯ ಸೇವನೆ ಮಾಡಿ ಅನಂತರ ಆಟೋ ರಿಕ್ಷಾದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ತೆರಳುವ ರಸ್ತೆಯಲ್ಲಿನ ಪಿಜ್ಜಾ ಶಾಪ್‌ಗೆ ಆಗಮಿಸಿ ಮೊದಲೇ ಆರ್ಡರ್ ಮಾಡಿದ್ದ ಪಿಜ್ಜಾದ ಬಗ್ಗೆ ವಿಚಾರಿಸಿದ್ದರು. ಬಳಿಕ ಪಿಜ್ಜಾ ಶಾಪ್‌ನೊಳಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರು. ಈ ವೇಳೆ ಅಲ್ಲಿನ ಸಿಬಂದಿ ಹೊರಗೆ ಹೋಗುವಂತೆ ಸೂಚಿಸಿದ್ದರು. ಗ್ರಾಹಕರನ್ನು ಹೊರಗೆ ಹೋಗಲು ಹೇಳಲು ನೀವ್ಯಾರು ಎಂದು ಮಹಿಳೆ ಪ್ರಶ್ನಿಸಿದ್ದರು. ಬಳಿಕ ಅಲ್ಲಿನ ಸಿಬಂದಿ ಅವರನ್ನು ಹೊರಗೆ ದೂಡಿದ್ದರು.
ಈ ಘಟನೆಗಳನ್ನು ನೋಡಿದ ಸಾರ್ವಜನಿಕರು ಮಹಿಳೆಯ ಮದ್ಯದ ನಶೆ ಇಳಿಸಲು ಅವರ ಮೈಮೇಲೆ ತಣ್ಣೀರು ಎರಚಿದ್ದರು. ಇದರಿಂದ ಮತ್ತಷ್ಟು ಕೆರಳಿದ ಮಹಿಳೆ ರಾದ್ಧಾಂತವನ್ನೇ ಸೃಷ್ಟಿಸಿದ್ದಳು. ಘಟನ ಸ್ಥಳಕ್ಕೆ ಪೊಲೀಸರೂ ಭೇಟಿ ನೀಡಿ ಆಕೆಯನ್ನು ಸಮಾಧಾನಪಡಿಸುವ ಕೆಲಸ ಮಾಡಿದ್ದರು.
ಅನಂತರ ಅವರನ್ನು ಮನೆಗೆ ಕಳುಹಿಸಲಾಯಿತು. ಈ ದೃಶ್ಯಾವಳಿ ಗಳು ಶನಿವಾರ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆದ ಪರಿಣಾಮ ದಂಪತಿಯನ್ನು ಮಣಿಪಾಲ ಪೊಲೀ ಸರು ಠಾಣೆಗೆ ಕರೆಯಿಸಿ ಲಘು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯನ್ನು ಮಾದಕ ಸೇವನೆಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಇನ್ನಷ್ಟೇ ಬರಬೇಕಿದೆ. ಪೊಲೀಸರು ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಯಿಸಿ ಅವರನ್ನು ಕಳುಹಿಸಿದ್ದಾರೆ.