ಐಸಿಸಿ ಟಿ20 ವಿಶ್ವಕಪ್ 2022 ಗ್ರೂಪ್ 2ರ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿದೆ. ಅಡಿಲೆಡ್ನ ಓವಲ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನೆದರ್ಲೆಂಡ್ಸ್ 13 ರನ್ಗಳ ಜಯ ಸಾಧಿಸಿದೆ. ಈ ಮೂಲಕ ಆಫ್ರಿಕಾನ್ನರ ಸೆಮಿ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಈ ಅಚ್ಚರಿಯ ಫಲಿತಾಂಶದಿಂದಾಗಿ ಭಾರತ ತಂಡವು ಕೊನೆಯ ಪಂದ್ಯವಾಡುವ ಮೊದಲೇ ಸೆಮಿ ಫೈನಲ್ ಪ್ರವೇಶಿಸಿತು. ಸೆಮಿ ಆಸೆಯನ್ನೇ ಬಿಟ್ಟಿದ್ದ ಪಾಕಿಸ್ಥಾನ ಮತ್ತು ಬಾಂಗ್ಲಾ ಆಸೆ ಜೀವಂತವಾಗಿದ್ದು ಇದೇ ಮೈದಾನದಲ್ಲಿ ಇವರಿಬ್ಬರ ನಡುವೆ ನಡಯಲಿರುವ ಪಂದ್ಯದಲ್ಲಿ ಗೆದ್ದವರು ಸೆಮಿಫೈನಲ್ ಪ್ರವೇಶಿಸಲಿದ್ದಾರೆ.
ನೆದರ್ಲೆಂಡ್ಸ್ ಬೌಲರ್ಗಳ ಅದ್ಭುತ ಪ್ರದರ್ಶನ ಆಫ್ರಿಕಾ ಸೋಲಿಗೆ ಮುಖ್ಯ ಕಾರಣವಾಯಿತು. ಇದೀಗ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ (PAK vs BAN) ನಡುವಣ ಪಂದ್ಯದ ಫಲಿತಾಂಶದ ಮೇಲೆ ಆಫ್ರಿಕಾ ಸೆಮೀಸ್ ಲೆಕ್ಕಚಾರ ನಿಂತಿದೆ. ಪಾಕ್-ಬಾಂಗ್ಲಾ ಪಂದ್ಯ ರದ್ದಾದರಷ್ಟೆ ಸೆಮಿ ಫೈನಲ್ ರೇಸ್ನಲ್ಲಿ ಆಫ್ರಿಕಾ ಉಳಿಯಲಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ಗೆ ಇಳಿದ ನೆದರ್ಲೆಂಡ್ಸ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿತು. ಓಪನರ್ಗಳಾದ ಮೈಬರ್ಗ್ ಹಾಗೂ ಮ್ಯಾಕ್ಸ್ ಡೌಡ್ ಅರ್ಧಶತಕದ ಜೊತೆಯಾಟ ಆಡಿದರು. ಮೈಬರ್ಗ್ 30 ಎಸೆತಗಳಲ್ಲಿ 7 ಫೋರ್ ಬಾರಿಸಿ 37 ರನ್ ಗಳಿಸಿದರು. ನಂತರ ಟಾಮ್ ಕೂಪರ್ ಜೊತೆಯಾದ ಡೌಡ್ ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. ಮ್ಯಾಕ್ಸ್ ಡೌಡ್ 31 ಎಸೆತಗಳಲ್ಲಿ 29 ರನ್ ಕಲೆಹಾಕಿದರು. ಇದರ ಬೆನ್ನಲ್ಲೇ ಸ್ಫೋಟಕ ಆಟವಾಡಿದ ಕೂಪರ್ 19 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿ 35 ರನ್ ಚಚ್ಚಿದರು.
ಅಂತಿಮ ಹಂತದಲ್ಲಿ ಮನಬಂದಂತೆ ಬ್ಯಾಟ್ ಬೀಸಿದ ಕಾಲಿನ್ ಅಕ್ವರ್ಮೆನ್ ಕೇವಲ 26 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಬಾರಿಸಿ ಅಜೇಯ 41 ರನ್ ಗಳಿಸಿದರು. ನಾಯಕ ಎಡ್ವರ್ಡ್ಸ್ ಅಜೇಯ 7 ರನ್ ಬಾರಿಸಿದರು. ಅಂತಿಮವಾಗಿ ನೆದರ್ಲೆಂಡ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು. ಆಫ್ರಿಕಾ ಪರ ಕೇಶವ್ ಮಹರಾಜ್ 2 ಹಾಗೂ ಆನ್ರಿಚ್ ನಾರ್ಟ್ಜೆ, ಮಾರ್ಕ್ರಮ್ ತಲಾ 1 ವಿಕೆಟ್ ಪಡೆದರು.
159 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆಗೆ ಕ್ವಿಂಟನ್ ಡಿಕಾಕ್ (13) ವಿಕೆಟ್ ಕಳೆದುಕೊಂಡಿತು. ನಾಯಕ ತೆಂಬಾ ಬವುಮಾ 20 ಎಸೆತಗಳಲ್ಲಿ 20 ರನ್ ಗಳಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ರಿಲೀ ರೊಸ್ಸೋ 19 ಎಸೆತಗಳಲ್ಲಿ 25 ರನ್ ಬಾರಿಸಿ ಔಟಾದರು. ನಂತರ ಬಂದ ಬ್ಯಾಟರ್ಗಳು ಯಾರೂ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆ್ಯಡಂ ಮಾರ್ಕ್ರಮ್ ಹಾಗೂ ಡೇವಿಡ್ ಮಿಲ್ಲರ್ ತಲಾ 17 ರನ್ಗೆ ಬ್ಯಾಟ್ ಕೆಳಗಿಟ್ಟರು.
ಹೆನ್ರಿಚ್ ಕ್ಲಾಸೆನ್ ಹೋರಾಟ 21 ರನ್ಗೆ ಅಂತ್ಯವಾದರೆ ವೇನ್ ಪರ್ನೆಲ್ ಸೊನ್ನೆ ಸುತ್ತಿದರು. ಕೊನೆಯ 6 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 26 ರನ್ಗಳ ಅವಶ್ಯಕತೆಯಿತ್ತು. ಆದರೆ, ಕೊನೆಯ ಓವರ್ನಲ್ಲೂ ವಿಕೆಟ್ ಕಳೆದುಕೊಂಡು ಆಫ್ರಿಕಾ ಸೋಲು ಕಂಡಿತು. ಹರಿಣಗಳು 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 145 ರನ್ಗಳನ್ನಷ್ಟೆ ಕಲೆಹಾಕಿತು. ನೆದರ್ಲೆಂಡ್ಸ್ ಪರ ಬ್ರಾಂಡನ್ ಗ್ಲೋವರ್ 2 ಓವರ್ಗೆ 9 ರನ್ ನೀಡಿ 3 ವಿಕೆಟ್ ಕಿತ್ತರೆ, ಫ್ರೆಡ್ ಕ್ಲಾಸೆನ್ 2 ವಿಕೆಟ್ ಪಡೆದರು.