ಬೆಂಗಳೂರು: ಕಂದಕಕ್ಕೆ ಕಾರು ಬಿದ್ದು, 8 ಅಯ್ಯಪ್ಪ ಭಕ್ತರು ಮೃತಪಟ್ಟಿರುವ ಘಟನೆ ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಥೇಣಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕುಮಿಲಿ ಪರ್ವತ ಪ್ರದೇಶದಲ್ಲಿ ದುರಂತ ಸಂಭವಿಸಿದ್ದು, ಸುಮಾರು 40 ಅಡಿ ಆಳದ ಕಂದಕಕ್ಕೆ ಅಯ್ಯಪ್ಪ ಭಕ್ತರಿದ್ದ ಕಾರು ಉರುಳಿತು ಎಂದು ಜಿಲ್ಲಾಧಿಕಾರಿ ಕೆ.ವಿ.ಮುರಳೀಧರನ್ ತಿಳಿಸಿದ್ದಾರೆ. ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರೂ ಥೇಣಿ-ಅಂಡಿಪೆಟ್ಟಿ ನಿವಾಸಿಗಳಾಗಿದ್ದರು. ಅಪಘಾತ ಸಂಭವಿಸಿದಾಗ ಕಾರಿನಲ್ಲಿ ಒಟ್ಟು 10 ಮಂದಿ ಇದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದರು. ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ 3 ವರ್ಷದ ಒಂದು ಮಗುವೂ ಸೇರಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಪ್ರದೇಶದಲ್ಲಿ ಮಂಜು ತೀವ್ರವಾಗಿ ಮುಸುಕಿದ್ದ ಕಾರಣ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅಪಘಾತಕ್ಕೆ ಇದು ಮುಖ್ಯ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಯಾತ್ರೆಗೆ ಕೊವಿಡ್ ಕಾರಣಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದೀಗ ನಿರ್ಬಂಧಗಳನ್ನು ತೆರವುಗೊಳಿಸಿರುವುದರಿಂದ ಪ್ರತಿದಿನ ಸಾವಿರಾರು ಭಕ್ತರು ಪವಿತ್ರಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಮಂಡಲಂ-ಮಕರವಿಳಕ್ಕು ಎಂದು ಕರೆಯಲಾಗುವ ಈ ತೀರ್ಥಯಾತ್ರೆಗೆ ಭಾರತದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಸರಾಸರಿ 10ರಿಂದ 15 ಲಕ್ಷ ಮಂದಿ ಶಬರಿಮಲೆಗೆ ಭೇಟಿ ನೀಡುವುದು ವಾಡಿಕೆಯಾಗಿದೆ.