ಬೆಂಗಳೂರು: ಅವರಿಬ್ಬರೂ ಇನ್ನೂ ಹದಿಹರಯದ ವಯಸ್ಸಿನ ಯುವಕ-ಯುವತಿ. ಚಿಕ್ಕ ವಯಸ್ಸಿನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು ಪರಿಚಯ ಪ್ರೀತಿವರೆಗೂ ಕರೆದುಕೊಂಡು ಹೋಗಿತ್ತು. ಆದ್ರೆ ಅದೇ ಹುಚ್ಚು ಪ್ರೀತಿಯೆ ಹುಚ್ಚು ಪ್ರೇಮಿಕನ ಜೊತೆ ಮಾಡಬಾರದ ಕೆಲಸ ಮಾಡಿಸಿದ್ದು ಇದೀಗ ಪ್ರೇಮ ಪಕ್ಷಿಯಾಗಬೇಕಿದ್ದವನು ಜೈಲು ಹಕ್ಕಿಯಾಗಿದ್ದಾನೆ.
ಮೂಗಿನ ಕೆಳಗೆ ಇನ್ನೂ ಸರಿಯಾಗಿ ಮೀಸೆ ಚಿಗುರಿಲ್ಲ. ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಹಂತಕ್ಕೂ ಏನು ಸಾಧನೆ ಮಾಡಿಲ್ಲ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡ್ತಾ ಫುಲ್ ಆಕ್ಟೀವ್ ಇದ್ದ. ಜೊತೆಗೆ ಇದೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕವಳನ್ನ ಬುಟ್ಟಿಗೆ ಹಾಕ್ಕೊಂಡಿದ್ದ. ಮುಂದೆ ಪಾಗಲ್ ಪ್ರೇಮಿಯಾಗಿ ಕೊನೆಗೆ ತನ್ನನ್ನ ಒಲ್ಲೆ ಅಂದಳು ಅಂತಾ ಅದೇ ಜತೆಗಿದ್ದ ಯುವತಿಯ ಜೀವವನ್ನೇ ತೆಗೆಯುವ ಹಂತಕ್ಕೆ ಬಂದಿದ್ದಾನೆ.
ಹೌದು ಅಷ್ಟಕ್ಕೂ ಇಂತಹ ದುಷ್ಕೃತ್ಯಕ್ಕೆ ಮುಂದಾಗಿ ಇದೀಗ ಜೈಲುಹಕ್ಕಿಯಾಗಿರುವ ಈ ಪಾಗಲ್ ಪ್ರೇಮಿಯ ಹೆಸರು ಮಂಜುನಾಥ್. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯವನಾದ ಇವನು, ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ಗ್ರಾಮಕ್ಕೆ ಬಂದವನೆ ಅದೊಂದು ಮನೆಯ ವಿಳಾಸ ಕೇಳಿಕೊಂಡು ಹೋಗಿದ್ದಾನೆ.
ಈ ವೇಳೆ ಅಂಗಡಿಯವರು ವಿಳಾಸ ಹೇಳಿದ್ದು, ಸೀದಾ ಮನೆ ಬಳಿಗೆ ಬಂದವನೇ ಮನೆ ಮುಂದಿದ್ದ ಪ್ರೇಯಸಿಯ ಬಳಿ ನೀರು ಕೇಳಿದ್ದು ಆಕೆ ನೀರು ತರುವುದಕ್ಕೆ ಅಂತ ಮನೆಯೊಳಗೆ ಹೋಗಿದ್ದಾಳೆ. ಈ ವೇಳೆ ಹಿಂದೆಯೆ ಹಿಂಬಾಲಿಸಿ ಹೋದವನೆ ಕೆಲಕಾಲ ಆಕೆಯನ್ನ ತನ್ನ ಜೊತೆ ಬರುವಂತೆ ಕೇಳಿದ್ದು ಅದಕ್ಕೆ ಆಕೆ ಒಲ್ಲೆ ಎಂದಿದ್ದಾಳೆ.
ಹೀಗಾಗಿ ನನ್ನ ಜೊತೆ ಬರಲ್ಲ ಅಂತಿಯಾ? ಅಂದವನೇ ಆಕೆಯ ಮೇಲೆ ಬ್ಲೇಡ್ ನಿಂದ ಕುತ್ತಿಗೆಗೆ ಚುಚ್ಚಿ ಹಲ್ಲೆ ಮಾಡಿದ್ದು ನಂತರ ತಾನು ಕುತ್ತಿಗೆಯನ್ನ ಕೊಯ್ದುಕೊಂಡು ಆತ್ಮಹತ್ಯೆ ಯತ್ನ ಮಾಡಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಇನ್ನು ರಕ್ತದ ಮಡುವಿನಲ್ಲಿ ಬಿದ್ದ ಇಬ್ಬರನ್ನೂ ಕಂಡ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಲವ್, ಲೈವ್ ನಲ್ಲಿ ಮಾರಣಾಂತಿಕ ಹಲ್ಲೆ:
ಅಂದಹಾಗೆ ಈ ಪಾಗಲ್ ಪ್ರೇಮಿ ಮಂಜುನಾಥ್ ಇನ್ಸ್ಟಾಗ್ರಾಮ್ ನಲ್ಲಿ ಆಕ್ಟೀವ್ ಆಗಿ ರೀಲ್ಸ್ ಮಾಡ್ತಿದ್ದು ಆಗಾಗ ರೀಲ್ಸ್ ಗೆ ಲೈಕ್ ಕೊಡ್ತಿದ್ದ ಯುವತಿಯ ಜೊತೆ ಚಾಟ್ ಮಾಡ್ತಿದ್ನಂತೆ. ಜತೆಗೆ ಚಾಟಿಂಗ್ ನಿಂದ ಇಬ್ಬರು ಪರಿಚಯ ಹೆಚ್ಚಾಗಿದ್ದು ಇಬ್ಬರೂ ಒಂದೆರಡು ಬಾರಿ ಭೇಟಿ ಸಹ ಆಗಿ ಆಕೆಗೆ ಒಂದು ಮೊಬೈಲ್ ಕೂಡ ಕೊಡಿಸಿದ್ದನಂತೆ. ಆದ್ರೆ ಮೊಬೈಲ್ ನಲ್ಲಿ ಮಾತನಾಡ್ತಿದ್ದನ್ನ ಕಂಡ ಪೋಷಕರು ಆಕೆಗೆ ಬುದ್ದಿವಾದ ಹೇಳಿದ್ದರು.
ನಂತರ ಹೊಸಕೋಟೆ ಬಳಿಯ ಸಂಬಂಧಿಕರ ಮನೆಗೆ ಬಿಟ್ಟಿದ್ದಾರೆ. ಹೀಗಾಗಿ ನಾ ನಿನ್ನ ಬಿಟ್ಟಿರಲಾರೆ ನನ್ನ ಜೊತೆ ಬಂದುಬಿಡು ಅಂತ ಗ್ರಾಮಕ್ಕೆ ಹುಡುಕಿಕೊಂಡು ಮಂಜುನಾಥ್ ಬಂದಿದ್ದ. ಯುವತಿ ಬರಲ್ಲ ಅಂದಿದ್ದಕ್ಕೆ ಮನನೊಂದು ಆಕೆಯ ಮೇಲೆ ಹಲ್ಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ. ಇನ್ನು ಹಾಡಹಾಗಲೆ ನಡೆದ ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಒಟ್ಟಾರೆ ಮೂಡಬಾರದ ವಯಸ್ಸಲ್ಲಿ ಮೂಡಿದ ಪ್ರೀತಿಗೆ ಮಿಡಿದು, ತಲೆಕೆಡೆಸಿಕೊಂಡ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿ ಸಿಗಲಿಲ್ಲ ಅಂತ ಆಕೆಯನ್ನ ಸಾಯಿಸಿ ತಾನೂ ಸಾಯಲು ಮುಂದಾಗಿದ್ದು ಇಂದಿನ ಸೋಷಿಯಲ್ ಮೀಡಿಯಾ ಜಮಾನಾದಲ್ಲಿ ನಿಜಕ್ಕೂ ವಿಪರ್ಯಾಸ. ಇನ್ನು, ಇಬ್ಬರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದು ಹುಚ್ಚು ಪ್ರೀತಿಯ ಬಲೆಗೆ ಬಿದ್ದು ಮಾಡಬಾರದ ಕೆಲಸ ಮಾಡಲು ಹೋದವನು ಇದೀಗ ಜೈಲಿನಲ್ಲಿ ಕಂಬಿ ಎಣಿಸಲು ಮುಂದಾಗಿದ್ದಾನೆ.
ವರದಿ: ನವೀನ್, ದೇವನಹಳ್ಳಿ