ಸಕಲೇಶಪುರ: ಮಧ್ಯರಾತ್ರಿ ಮೀನು ಹಿಡಿಯಲು ಹೋಗಿದ್ದ RSS ಸಂಘ ಪರಿವಾರದ ಸಂಘದ ಕಾರ್ಯಕರ್ತ ಸೇರಿ ಮೂವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದ್ದು ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಆರ್.ಎಸ್.ಎಸ್ ಹಾಗೂ ಬಿಜೆಪಿ ಕಾರ್ಯಕರ್ತರಾಗಿರುವ ತಂಬಲಗೇರಿ ಗ್ರಾಮದ ನವೀನ್ ಅಲಿಯಾಸ್ ಪಚ್ಚಿ (39) ಎಂದು ತಿಳಿದು ಬಂದಿದೆ.
ಘಟನೆಯು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ಗುಂಡಿನ ದಾಳಿಯು ನಡೆದಿದ್ದು ಇದರಿಂದ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಈ ಒಂದು ಘಟನೆಯಲ್ಲಿ ಇನ್ನಿಬ್ಬರಾದ ದಯಾನಂದ ಹಾಗೂ ಪದ್ಮನಾಭ ಅವರು ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.
ಜೊತೆಗಿದ್ದ ನವೀನ್, ದಯಾನಂದ, ಪದ್ಮನಾಭ, ರಾಜಾಚಾರಿ ಸೇರಿ ನಾಲ್ವರು ರಾತ್ರಿ ಮೀನು ಹಿಡಿಯಲು ತೆರಳಿದ್ದರು. ಹೇಮಾವತಿ ನದಿಯ ದಡದಲ್ಲಿ ಮೀನು ಹಿಡಿಯಲು ಬೆಂಕಿ ಹಾಕಿಕೊಂಡು ಕುಳಿತಿದ್ದ ವೇಳೆ ನಾಲ್ವರು ಸ್ನೇಹಿತರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ನವೀನ್ ಸ್ಥಳದಲ್ಲೇ ಗುಂಡಿಗೆ ಬಲಿಯಾದರೆ, ದಯಾನಂದ ಹಾಗೂ ಪದ್ಮನಾಭ ಗಂಭೀರವಾಗಿ ಗಾಯಗೊಂಡಿದ್ದು, ಅದೃಷ್ಟವಶಾತ್ ರಾಜಾಚಾರಿ ಗುಂಡಿನ ದಾಳಿಯಿಂದ ಪಾರಾಗಿದ್ದಾರೆ.
ಶಿಕಾರಿಗೆ ತೆರಳಿದ್ದವರಿಂದ ಗುಂಡಿನ ದಾಳಿ ನಡೆದಿದೆಯೋ ಅಥವಾ ಹತ್ಯೆ ಮಾಡಲೆಂದು ನಡೆಸಿದ ದಾಳಿಯೋ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದ್ದು, ಸ್ಥಳ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಯದ ತಜ್ಞರು ತಯಾರಿ ನಡೆಸಿದ್ದಾರೆ.
ಇನ್ನೊಂದೆಡೆ ಎಫ.ಎಸ್.ಎಲ್ ತಂಡದ ಆಗಮನಕ್ಕಾಗಿ ಮೃತದೇಹ ಇದ್ದ ಸ್ಥಳದಲ್ಲೇ ರಾತ್ರಿಯಿಂದಲೂ ಪೊಲೀಸರು ಕಾಯುತ್ತಿದ್ದು ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸ್.ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.