ಬಳ್ಳಾರಿ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿಯೂ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಸಿಂಧವಾಳ ಗ್ರಾಮದ ಬಳಿ ಗುರುವಾರ ನಡೆದಿದೆ. ಘಟನೆಯಲ್ಲಿ ಒಬ್ಬ ಮಗಳನ್ನು ರಕ್ಷಿಸಲಾಗಿದೆ.
ಲಕ್ಷ್ಮಿ (35), ಶಾಂತಿ (3), ವೆನ್ನೆಲ (4) ಕಾಲುವೆಗೆ ಹಾರಿದ ದುರ್ದೈವಿ ತಾಯಿ, ಮಕ್ಕಳು. ಘಟನೆಯಲ್ಲಿ ಒಬ್ಬ ಮಗಳು ವೆನ್ನೆಲಳನ್ನು ಸ್ಥಳೀಯರು ದಡ ಸೇರಿಸಿ ರಕ್ಷಿಸಿದ್ದಾರೆ.
ಮೂಲತಃ ಬಳ್ಳಾರಿ ನಗರದ ಗುಗ್ಗರಹಟ್ಟಿ ನಿವಾಸಿಯಾದ ಲಕ್ಷ್ಮಿಳನ್ನು ನೆರೆಯ ಆಂಧ್ರದ ಅಲೂರು ಗ್ರಾಮದ ವೀರಭದ್ರ ಎನ್ನುವವರೊಂದಿಗೆ ವಿವಾಹವಾಗಿದ್ದು, ನಾಲ್ಕು ಹೆಣ್ಣು ಮಕ್ಕಳಿದ್ದರು. ಗಂಡು ಮಗು ಆಗದೆ, ನಾಲ್ಕು ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದ ಹಿನ್ನೆಲೆಯಲ್ಲಿ ಮನೆಯಲ್ಲೂ ಆಗಾಗಾ ಪತಿ-ಪತ್ನಿಯ ನಡುವೆ ಜಗಳವಾಗುತ್ತಿತ್ತು.
ಇದರಿಂದ ಬೇಸತ್ತ ಪತ್ನಿ ಲಕ್ಷ್ಮಿ ತನ್ನ ಇಬ್ಬರು ವೆನ್ನೆಲ (4), ಶಾಂತಿ (3) ಮಕ್ಕಳೊಂದಿಗೆ ತಾಲೂಕಿನ ಸಿಂಧವಾಳ ಗ್ರಾಮದ ಬಳಿಯ ಎಲ್ ಎಲ್ ಸಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಯನ್ನು ಕಂಡ ಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರು ಒಬ್ಬ ಮಗಳು ವೆನ್ನೆಲಳನ್ನು ರಕ್ಷಿಸಿದ್ದಾರೆ. ಮತ್ತೊಬ್ಬ ಮಗಳು, ತಾಯಿ ಇಬ್ಬರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿಲ್ಲ ಎಂದು ಮೋಕ ಠಾಣೆಯ ಪೊಲೀಸರು ತಿಳಿಸಿದ್ದಾರೆ.