ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಆರ್ ಜೆಡಿಯ ಹಿರಿಯ ನಾಯಕ ಶರದ್ ಯಾದವ್ ಅವರು ಗುರುವಾರ ನಿಧನರಾಗಿದ್ದಾರೆ.
ಇತ್ತೀಚೆಗೆ ಶರದ್ ಯಾದವ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಜನವರಿ 12)ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1997ರಲ್ಲಿ ಲಾಲು ಪ್ರಸಾದ್ ಯಾದವ್ ಜನತಾ ದಳದಿಂದ ಬೇರ್ಪಟ್ಟು ತಮ್ಮದೇ ಆದ ರಾಷ್ಟ್ರೀಯ ಜನತಾ ದಳವನ್ನು ಸ್ಥಾಪಿಸಿದ್ದರು. ಅದಾದ ನಂತರ ನಿತೀಶ್ ಕುಮಾರ್ ಜೊತೆಗೆ ಶರದ್ ಯಾದವ್ ಸುದೀರ್ಘ ರಾಜಕೀಯ ಪಯಣ ಮಾಡಿದ್ದರು.
ಇಬ್ಬರ ನಡುವಿನ ಬಿರುಕಿನ ನಂತರ, ಶರದ್ ಯಾದವ್ ಅವರು ಲೋಕ ತಾಂತ್ರಿಕ ಜನತಾ ದಳ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಇತ್ತೀಚೆಗೆ ಆ ಪಕ್ಷವನ್ನು ಲಾಲು ಪ್ರಸಾದ್ ಪಕ್ಷದಲ್ಲಿ ವಿಲೀನಗೊಳಿಸಿದ್ದರು. ಇದರೊಂದಿಗೆ 1997ರಲ್ಲಿ ಬೇರ್ಪಟ್ಟಿದ್ದ ಈ ನಾಯಕರು 25 ವರ್ಷದ ನಂತರ ಒಂದಾಗಿದ್ದರು.
ರಾಜಕೀಯ ಹಾದಿ:
ಜಬಲ್ಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಜಬಲ್ಪುರದ ರಾಬರ್ಟ್ಸನ್ ಮಾಡೆಲ್ ಸೈನ್ಸ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದಿದ್ದರು. ಶಾಲೆಯಲ್ಲಿದ್ದಾಗಲೇ ರಾಜಕೀಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಶರದ್ ಯಾದವ್ ಅವರು, ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರಿಂದ ಪ್ರಭಾವಿತರಾಗಿ್ದ್ದರು. ನಂತರ ಭಾರತೀಯ ಜನತಾ ದಳಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು.
2003ರಿಂದ 2016ರವರೆಗೆ ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶರದ್ ಯಾದವ್, ಮಧ್ಯಪ್ರದೇಶದ ಜಬಲ್ಪುರದಿಂದ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶಿಸಿದ್ದರು.ಲೋಕಸಭೆ ಸದಸ್ಯರಾಗಿ 7 ಸಲ, ರಾಜ್ಯಸಭೆ ಸದಸ್ಯರಾಗಿ 4 ಸಲ ಆಯ್ಕೆಯಾಗಿದ್ದು, ವಿ.ಪಿ.ಸಿಂಗ್, ವಾಜಪೇಯಿರವರ ಸರ್ಕಾರದಲ್ಲಿ ಕೇಂದ್ರದ ಜವಳಿ ಮತ್ತು ಆಹಾರ ಸಂಸ್ಕರಣಾ, ಕಾರ್ಮಿಕ ಇಲಾಖೆ, ನಾಗರಿಕ ವಿಮಾನಯಾನ, ಆಹಾರ ಸಚಿವರಾಗಿದ್ದರು.
ಇನ್ನು 2004ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿತೀಶ್ ಕುಮಾರ್ ಸಹಕಾರದಿಂದ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ನಿತೀಶ್ ಕುಮಾರ್ ಅವರ ಜೊತೆಗಿನ ಸಂಬಂಧ ಹಾಳಾಗಿದ್ದರಿಂದ ಅವರು 2018ರಲ್ಲಿ ತಮ್ಮದೇ ಆದ ಲೋಕತಾಂತ್ರಿಕ್ ಜನತಾ ದಳ ಸ್ಥಾಪಿಸಿದ್ದರು. ಬಳಿಕ ಮಾರ್ಚ್ 2022 ರಲ್ಲಿ ಎಲ್‌ಜೆಡಿಯನ್ನು ಆರ್‌ಜೆಡಿ ಜೊತೆ ವಿಲೀನಗೊಳಿಸಿದ್ದರು. ಈ ಮೂಲಕ ಮೂರು ದಶಕಗಳ ಬಳಿಕ ಲಾಲು ಪ್ರಸಾದ್ ಮತ್ತು ಶರದ್ ಯಾದವ್ ಒಂದಾಗಿದ್ದರು.