ಬೈತಡ್ಕ: ಮತವರ್ಣ ಬೇದಭಾವವನ್ನು ಅಳಿಸಿ, ಸೌಹಾರ್ದತೆಗೆ ಸಾಕ್ಷಿಯಾಗಿ ಜಾತಿಮತ ಭೇದಭಾವವಿಲ್ಲದೆ ಪುರಾತನ ಕಾಲದಿಂದಲೂ ಬೈತಡ್ಕ ದರ್ಗಾ ಶರೀಫ್ ವಠಾರದಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಮಶ್‌ಹೂರ್ (ರ) ಅವರ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ಅತೀ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚರಿತ್ರೆಪ್ರಸಿದ್ದವಾದ ಬೈತಡ್ಕ ಉದಯಾಸ್ತಮಾನ ಉರೂಸ್‌ನ ಸಮಾರೋಪ ಇಂದು ರಾತ್ರಿ ನಡೆಯಲಿದೆ.
ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ಮತಪ್ರವಚನದ ಅಂತಿಮ ದಿನವಾದ ಇಂದು ರಾತ್ರಿ ಅಸ್ಸಯ್ಯಿದ್ ಬದ್ರುಸ್ಸಾದಾತ್ ಇಬ್ರಾಹಿಂ ಅಲ್ ಬುಖಾರಿ ತಂಙಲ್ ಕಡಲುಂಡಿ, ಅಸ್ಸಯ್ಯಿದ್ ಕೆ ಎಸ್ ಆಟಕೋಯ ತಂಙಲ್ ಕುಂಬೋಲ್, ಶಾಫಿ ಸಖಾಫಿ ಮುಂಡಾಂಬ್ರ ಸೇರಿ ಹಲವಾರು ಸಯ್ಯದ್‌ಗಳು, ಉಲಮಾಗಳ ಉಪಸ್ಥಿಯೊಂದಿಗೆ ಉರೂಸ್ ಸಮಾಪ್ತಿಗೊಳ್ಳಲಿದೆ.
ಇಂದು ಸಮಾರೋಪಗೊಂಡು ನಾಳೆ ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಾಳೆ ಸಂಜೆ ಐದಕ್ಕೆ ಉರೂಸ್ ಸಮಾಪ್ತಿಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಮಾರೋಪದ ಬಳಿಕ ಇಂದು ರಾತ್ರಿಯಿಂದಲೇ ಅನ್ನದಾನ ನಡೆಯಲಿದ್ದು, ನಾಳೆ ಸಂಜೆ ಐದು ಗಂಟೆಯವರೆಗೆ ಅನ್ನದಾನ ಮುಂದುವರಿಯಲಿದೆ.
ಉರೂಸ್ ಕಾರ್ಯಕ್ರಮಕ್ಕೆ ವಿವಿಧ ಭಾಗದಿಂದ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು. ಯಾವುದೇ ಆಹಿತಕರ ಘಟನೆ ನಡೆಯದಂತೆ ಪೋಲಿಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.