ಅಬುದಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ ಅಬುದಾಬಿ ಇದರ ವತಿಯಿಂದ ಬೃಹತ್ ಇಫ್ತಾರ್ ಕೂಟವು ದಿನಾಂಕ 31/03/2023 ರಂದು ಯಶಸ್ವಿಯಾಗಿ ನಡೆಯಿತು.
ಎಂದಿನಂತೆ ಈ ವರ್ಷವೂ ದಿನಾಂಕ 31/03/2023 ನೇ ಶುಕ್ರವಾರದಂದು ರಂಝಾನ್ ತಿಂಗಳ ಒಂಭತ್ತನೇಯ ದಿನದಂದು ಬೃಹತ್ ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಸಂಸ್ಥೆಯ ಪ್ರತಿನಿಧಿ ಅಬ್ದುಲ್ ಮುಜೀಬ್ ಉಚ್ಚಿಲರವರ ಕಿರಾಅತ್ ಪಾರಾಯಣದೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಬಹುಮಾನ್ಯರಾದ ಕೆ.ಎಂ ಮುಸ್ತಫಾ ನಯೀಮಿ ಹಾವೇರಿ ಉಸ್ತಾದರು ನೆರೆದಿದ್ದ ಸಮೂಹಕ್ಕೆ ಮೌಲ್ಯಯುತ ಧಾರ್ಮಿಕ ಸಂದೇಶವನ್ನು ನೀಡಿದರೆ,ಬಹುಮಾನ್ಯರಾದ ಅಬೂ ಸುಫಿಯಾನ್ (ಎಚ್.ಎ. ಇಬ್ರಾಹಿಂ ಮದನಿ) ಉಸ್ತಾದರು ಆಶೀರ್ವಚನಗೈದರು. ಸಂಸ್ಥೆಯ ಅಧ್ಯಕ್ಷರಾದ ಮುಹಮ್ಮದ್ ಅಲಿ ಉಚ್ಚಿಲ್ ಸರ್ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯ ಕಾರ್ಯವೈಖರಿಗಳ ಬಗ್ಗೆ ವಿವರಿಸಿದರೆ,ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಸರ್ ರವರು ಜಾಗತಿಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಸಲಹೆ ಹಾಗೂ ಕರೆ ನೀಡಿದರು.ಪ್ಲಾಸ್ಟಿಕ್ ಮಿತ ಬಳಕೆ – ಪರಿಸರ ಸಂರಕ್ಷಣೆ ಎಂಬ ವಿಶೇಷ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ಭಾರತ – ಈಜಿಪ್ಟ್ ಸೋಲೋ ಸೈಕಲ್ ಸವಾರಿ ಮೂಲಕ ಉನ್ನತ ಧಾರ್ಮಿಕ ವಿದ್ಯಾರ್ಜನೆಗೈಯ್ಯಲು ತೆರಳುವ ಹಾದಿಯಲ್ಲಿ ಅಬುಧಾಬಿ ತಲುಪಿರುವ ಯುವ ಚೈತನ್ಯ ಹಾಫಿಲ್ ಅಹ್ಮದ್ ಸಾಬಿತ್ ರವರು ವೇದಿಕೆಯಲ್ಲಿ ತನ್ನ ಸ್ಪೂರ್ತಿಧಾಯಕ ಮಾತಿನ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದರು.ಯಶಸ್ವಿಯಾಗಿ ನಡೆದ ಕಾರ್ಯಕ್ರಮಕ್ಕೆ ಸುಮಾರು ಆರ್ನೂರಕ್ಕಿಂತಲೂ ಹೆಚ್ಚು ಬ್ಯಾರೀ ಸಮುದಾಯದ ಯುವಕರೂ, ಪುರುಷರು,ಮಹಿಳೆಯರು,ಮಕ್ಕಳು ಸಾಕ್ಷಿಯಾದರು.ಸಂಸ್ಥೆಯ ಉಪಾಧ್ಯಕ್ಷರಾದ ಅಬ್ದುಲ್ ರವೂಫ್ ಹಾಜಿ ಕೈಕಂಬರವರು ಕಾರ್ಯಕ್ರಮವನ್ನು ನಿರೂಪಿಸಿದರೆ,ಸಂಸ್ಥೆಯ ಪ್ರತಿನಿಧಿ ಅಬ್ದುಲ್ ರಶೀದ್ ವಿ.ಕೆ ರವರು ಧನ್ಯವಾದ ಸಮರ್ಪಿಸಿದರು.
ಬೃಹತ್ ಇಫ್ತಾರ್ ಕೂಟ ನಡೆಸಿ ದುಂದುವೆಚ್ಚ ನಡೆಸುತ್ತಿದ್ದಾರೆಯೇ,ಆ ಹಣವನ್ನು ಬಡವರಿಗೆ ಹಂಚ ಬಹುದಲ್ಲವೇ,ಮದುವೆಗೆ ಸಹಾಯ ಮಾಡ ಬಹುದಲ್ಲವೇ ಎಂಬ ಋಣಾತ್ಮಕ ಚಿಂತನೆಗಳು ಮಸ್ತಿಷ್ಕದಿಂದ ಹೊರ ಬಂದರೆ ಖಂಡಿತವಾಗಿಯೂ ಅದೊಂದು ತಪ್ಪು ಕಲ್ಪನೆಯಾಗಿದೆ.ಯಾಕೆಂದರೆ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಸುನ್ನತ್ ಗಳಲ್ಲೊಂದಾದ ಸತ್ಯ ವಿಶ್ವಾಸಿ ವೃತಧಾರಿಯ ಉಪವಾಸ ತೊರೆಯಲು ನಡೆಸುವ ಇಫ್ತಾರ್ ಕೂಟವು ಕೂಡಾ ಒಂದು ಸತ್ಕರ್ಮವಾಗಿದೆ.ಸಾಧಾರಣವಾಗಿ ನಾವೆಲ್ಲರೂ ನಮ್ಮ ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಮನೆಗೆ ಊರಿನವರನ್ನು ಆಹ್ವಾನಿಸಿ ಇಫ್ತಾರ್ ಕೂಟ ನಡೆಸುತ್ತೇವೆ.ಕಡಿಮೆಯೆಂದರೂ ಹತ್ತಿಪ್ಪತ್ತು ಸಾವಿರವಂತೂ ಖರ್ಚು ಮಾಡುತ್ತೇವೆ.ಅದೇ ಉದ್ದೇಶವನ್ನಿಟ್ಟು ಕೊಂಡು ಅನಿವಾಸಿಗಳಾಗಿರುವ ನಮ್ಮ ಸಮುದಾಯದ ಜನರನ್ನು ಆಹ್ವಾನಿಸಿ ಇಫ್ತಾರ್ ಕೂಟ ನಡೆಸುವುದರಲ್ಲಿ ಯಾವುದೇ ದುಂದುವೆಚ್ಚವಿಲ್ಲ.ಹೊರಗಿನವರಿಂದ ಯಾವುದೇ ಆರ್ಥಿಕ ಸಹಾಯ ಯಾಚಿಸದೇ,ಸಂಸ್ಥೆಯ ಪ್ರತಿನಿಧಿಗಳೊಳಗೆ ಮಾತ್ರ ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಆಗುವ ಖರ್ಚು ವೆಚ್ಚಗಳನ್ನು ಒಂದುಗೂಡಿಸಿ,ಸಮುದಾಯದ ಜನರ ಸಮ್ಮಿಲನದೊಂದಿಗೆ ಪರಸ್ಪರ ಭೇಟಿ,ಪರಿಚಯ,ಬೇರೆ ಬೇರೆ ಊರಿನ,ಬೇರೆ ಬೇರೆ ಕುಟುಂಬಗಳ ಒಡನಾಟಗಳನ್ನುಂಟು ಮಾಡಲು ಅವಕಾಶವಾಗಿಸುವಂತಹ ಇಂತಹ ಕಾರ್ಯಕ್ರಮವು ಖಂಡಿತವಾಗಿಯೂ ಒಂದು ಉತ್ತಮವಾದ ಸಮಾಜಮುಖಿ ಕಾರ್ಯಗಳಲ್ಲೊಂದಾಗಿದೆ.
ಅಲ್ಲದೇ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ (BWF) ಸಂಸ್ಥೆಯು ಊರಿನಲ್ಲಿ ಸಾಮೂಹಿಕ ವಿವಾಹ,ಅಶಕ್ತರ ಮನೆ ದುರಸ್ಥಿ,ಪ್ರತಿಭಾನ್ವಿತರ ವಿದ್ಯಾರ್ಜನೆಗೆ ಆರ್ಥಿಕ ಸಹಾಯಗಳಂತಹ ಸಾಮುದಾಯಿಕ ಸಾಮಾಜಿಕ ಕಾರ್ಯಗಳನ್ನು ದಶಕಗಳಿಂದ ಮಾಡುತ್ತಾ ಬಂದಿರುತ್ತದೆ.ಈ ವರೆಗೆ ಏಳು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸುಮಾರು 110 ಜೋಡಿ ವಿವಾಹಗಳನ್ನು ನಡೆಸಿ ಕೊಟ್ಟ ಹಿರಿಮೆಯನ್ನು ತನ್ನಾದಾಗಿಸಿ ಕೊಂಡಿದೆ.ಬಡ ಹಾಗೂ ಅಶಕ್ತ ಕುಟುಂಬಗಳಿಗೆ ‘BWF ಶೌಚಾಲಯ ಯೋಜನೆಯ’ ಮೂಲಕ ಸುಮಾರು 175 ಕ್ಕೂ ಹೆಚ್ಚು ಶೌಚಾಲಯ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಕೊಡಲಾಗಿದೆ.
ತಮ್ಮ ಜೀವನವನ್ನು ರೂಪಿಸಲು ತನ್ನ ಕುಟುಂಬ ಬಂಧು ಮಿತ್ರಾದಿಗಳನ್ನು ಬಿಟ್ಟು ಬಲು ದೂರವಿರುವ ಮಾಯಾನಗರಿಗೆ ಉದ್ಯೋಗ ಅರಸಿ ಬಂದು ನೆಲೆಸಿರುವ ಅನಿವಾಸಿಗಳಿಗೆ ಮರುಭೂಮಿಯಲ್ಲಿರುವ ಓಯಸಿಸ್ ನಂತೆ, ತಮ್ಮ ಊರಿನ ಅದೇ ವಾತಾವರಣವನ್ನು ಆಹ್ಲಾದಿಸುವ ಸುಂದರ ಕ್ಷಣಗಳನ್ನು ಕಾಣುವ ಅವಕಾಶಕ್ಕಾಗಿ ವೇದಿಕೆ ನಿರ್ಮಿಸಿ ಆ ಮೂಲಕ ಸಾಹೋದರ್ಯತೆಯನ್ನು,ಭ್ರಾತೃತ್ವವನ್ನು ಸಾರುವ ಕಾರ್ಯವನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ (BWF) ದಶಕಗಳಿಂದ ನಡೆಸುತ್ತಿದೆ ಎಂದರೆ ತಪ್ಪಾಗಲಾರದು.
ಅನಿವಾಸೀ ಬ್ಯಾರೀ ಸಮುದಾಯದ ಅಭ್ಯುದಯಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯಲ್ಲಿ ದಶಕಗಳಿಂದ ಕಾರ್ಯಾಚರಿಸುತ್ತಿರುವ ಸಮುದಾಯದ ಹೆಮ್ಮೆಯ ಸಂಸ್ಥೆಯೇ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ (BWF).25 ಪ್ರತಿನಿಧಿಗಳನ್ನೊಳಗೊಂಡ ಸಂಸ್ಥೆಯು ಹಿರಿಯ ಸಾಮಾಜಿಕ ಧುರೀಣ ಗೌರವಾನ್ವಿತ ಮುಹಮ್ಮದ್ ಅಲಿ ಉಚ್ಚಿಲ್ ಸರ್ ಹಾಗೂ ಅನಿವಾಸಿ ಉದ್ಯಮಿ ಗೌರವಾನ್ವಿತ ಅಬ್ದುಲ್ಲಾ ಮದುಮೂಲೆ ಸರ್ ಅವರಂತಹ ಪ್ರಮುಖ ವ್ಯಕ್ತಿಗಳ ಸಾರಥ್ಯದಲ್ಲಿ ಹಲವಾರು ಸಮಾಜಮುಖಿ ಸಾಮುದಾಯಿಕ ಕಾರ್ಯಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ವಾರ್ಷಿಕವಾಗಿ ಪಿಕ್ನಿಕ್, ಬಾರ್ಬಿಕ್ಯೂ ಪಾರ್ಟಿ,ಇಫ್ತಾರ್ ಪಾರ್ಟಿ ಮುಂತಾದ ಸಮ್ಮಿಲನಗಳನ್ನು ಆಯೋಜಿಸುತ್ತಾ ಉದ್ಯೋಗ,ಕುಟುಂಬ ನಿರ್ವಹಣೆಯ ಜವಾಬ್ದಾರಿಯಿಂದ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ದಣಿದಿರುವ ಅನಿವಾಸಿ ಬ್ಯಾರೀ ಸಮುದಾಯದ ಮನಸ್ಸುಗಳಿಗೆ ತಂಪೆರೆಯುತ್ತಿದೆ ಈ ಸಂಸ್ಥೆ.
ವರದಿ: ಸಿರಾಜುದ್ದೀನ್ ಪರ್ಲಡ್ಕ