ಖಾಸಗಿ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಕಾರಲ್ಲಿದ್ದ ಮಗು ಸಹಿತ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ಹಿರೇಹಳ್ಳಿ ಬಳಿ ವರದಿಯಾಗಿದೆ.
ತುಮಕೂರು ಕಡೆಯಿಂದ ಬೆಂಗಳೂರಿಗೆ ತೆರಳುತಿದ್ದ ಇನ್ನೋವಾ ಕಾರಿಗೆ ಬೆಂಗಳೂರು ಕಡೆಯಿಂದ ತುಮಕೂರಿಗೆ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಚಳ್ಳಕೆರೆ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಗೋವಿಂದನಾಯ್ಕ(58) ಅವರ ಪತ್ನಿ ತಿಪ್ಪಮ್ಮ(52) ಹಾಗೂ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿದ್ದು, ಉಳಿದವರ ಹೆಸರು ಇನ್ನು ತಿಳಿಯಬೇಕಾಗಿದೆ.
ಕಾರ್ಯನಿಮಿತ್ತ ಚಳ್ಳಕೆರೆಗೆ ಬಂದಿದ್ದ ಗೋವಿಂದನಾಯ್ಕ ದಂಪತಿ ಬೆಂಗಳೂರಿಗೆ ಮರಳುವಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್, ಎಎಸ್‌ಪಿ ಮರಿಯಪ್ಪ, ನರ ಡಿವೈಎಸ್‌ಪಿ ಶ್ರೀನಿವಾಸ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.