ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, 7 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಶನಿವಾರವಷ್ಟೇ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿರುವ ಕೋಲಾರ ಕ್ಷೇತ್ರದ ಟಿಕೆಟ್ ಅನ್ನು ಕಾಂಗ್ರೆಸ್ ಬಾಕಿ ಇರಿಸಿಕೊಂಡಿದೆ.
ಈ ಮಧ್ಯೆ, ಚಿಕ್ಕಮಗಳೂರಿನಲ್ಲಿ ಮೂಲ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಹೆಚ್ಡಿ ತಮ್ಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದಾಗಿ ಚಿಕ್ಕಮಗಳೂರಿನಲ್ಲಿ ಬಂಡಾಯದ ಬಿಸಿ ಕಾಂಗ್ರೆಸ್ಗೆ ತಟ್ಟುವ ಸಾಧ್ಯತೆಯೂ ಇದೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಕ್ಷೇತ್ರದಲ್ಲಿ ಮೊಹಮ್ಮದ್ ಯೂಸುಫ್ ಸವಣೂರು ಅವರನ್ನು ಕಣಕ್ಕಿಳಿಸಲಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ನಿರೀಕ್ಷೆಯಂತೆಯೇ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ 75,794 ಮತಗಳನ್ನು ಪಡೆಯುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ಮಹೇಶ್ ನಲ್ವಾಡ್ ಅವರು 54,488 ಮತಗಳನ್ನು ಪಡೆದು 2ನೇ ಸ್ಥಾನ ಪಡೆದಿದ್ದರು. ಚುನಾವಣೆ ಬಳಿಕ ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೂಲಕ ಈ ಸಲದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಹುಡುಕಬೇಕಾದ ಅನಿವಾರ್ಯತೆ ಹುಟ್ಟುಹಾಕಿದ್ದರು. ಈಗ ಕಾಂಗ್ರೆಸ್ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್?
ಕ್ಷೇತ್ರ – ಅಭ್ಯರ್ಥಿ
ಲಿಂಗಸುಗೂರು ಕ್ಷೇತ್ರ – ದುರ್ಗಪ್ಪ ಎಸ್.ಹೂಲಗೇರಿ
ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರ -ಜಗದೀಶ್ ಶೆಟ್ಟರ್
ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರ – ದೀಪಕ್ ಚಿಂಚೋರೆ
ಶಿಗ್ಗಾಂವಿ ಕ್ಷೇತ್ರ – ಮೊಹಮ್ಮದ್ ಯೂಸುಫ್ ಸವಣೂರು
ಹರಿಹರ ಕ್ಷೇತ್ರ – ನಂದಗಾವಿ ಶ್ರೀನಿವಾಸ
ಚಿಕ್ಕಮಗಳೂರು ಕ್ಷೇತ್ರ – ಹೆಚ್.ಡಿ.ತಮ್ಮಯ್ಯ
ಶ್ರವಣಬೆಳಗೊಳ ಕ್ಷೇತ್ರ – ಎಂ.ಎ.ಗೋಪಾಲಸ್ವಾಮಿ
4ನೇ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ 2, ಒಕ್ಕಲಿಗ, ಭೋವಿ, ಕುರುಬ ಹಾಗೂ ಮುಸ್ಲಿಂ ಸಮುದಾಯದ ತಲಾ ಒಬ್ಬರು ಟಿಕೆಟ್ ಪಡೆದಿದ್ದಾರೆ. 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿಯಲ್ಲಿ 166, ಎರಡನೇ ಪಟ್ಟಿಯಲ್ಲಿ 23, ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಇದೀಗ ನಾಲ್ಕನೇ ಪಟ್ಟಿಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಇನ್ನು 8 ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನಷ್ಟೇ ಹೆಸರಿಸಬೇಕಿದೆ.
8 ಕ್ಷೇತ್ರಗಳ ಟಿಕೆಟ್ ಬಾಕಿ:
ಮಂಗಳೂರು ಉತ್ತರ, ಬೆಂಗಳೂರಿನ ಪುಲಿಕೇಶಿನಗರ, ಸಿ.ವಿ.ರಾಮನ್ನಗರ, ಕೆ.ಆರ್.ಪುರಂ, ಹಾಸನ ಜಿಲ್ಲೆ ಅರಕಲಗೂಡು, ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರ, ರಾಯಚೂರು ನಗರ ಕ್ಷೇತ್ರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ.
ಅಂತಿಮ ಆಗದ ಮಂಗಳೂರು ಉತ್ತರ ಕ್ಷೇತ್ರ:
ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಮಂಗಳೂರು ಉತ್ತರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಘೋಷಿಸದೇ ಬಾಕಿ ಉಳಿಸಿದೆ.
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ವೈ.ಭರತ್ ಶೆಟ್ಟಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಎರಡು ಸುತ್ತುಗಳ ಪ್ರಚಾರ ಕಾರ್ಯವನ್ನೂ ಅವರು ಪೂರ್ಣಗೊಳಿಸಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಅಂತಿಮಗೊಳಿಸದ ಕಾಂಗ್ರೆಸ್ ಹೈಕಮಾಂಡ್‌ನ ನಿಲುವು ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದೆ.
2013ರಲ್ಲಿ ಶಾಸಕರಾಗಿ ಆಯ್ಕೆಯಾಗಿ 2018ರ ಚುನಾವಣೆಯಲ್ಲಿ ಭರತ್ ಶೆಟ್ಟಿ ವಿರುದ್ಧ ಸೋತಿದ್ದ ಬಿ.ಎ.ಮೊಹಿಯುದ್ದೀನ್ ಬಾವ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಇಲ್ಲಿನ ಟಿಕೆಟ್ ಗಿಟ್ಟಿಸಲು ಪೈಪೋಟಿ ನಡೆಸುತ್ತಿದ್ದಾರೆ. ಬಾವ ಅವರು ಕ್ಷೇತ್ರದ ಗ್ರಾಮ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರ ವಿಶ್ವಾಸ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಇನಾಯತ್ ಅಲಿ ಅವರು ದೇವಸ್ಥಾನ ದೈವಸ್ಥಾನ, ಕೋಲ ನೇಮಗಳಿಗೆ ಭೇಟಿ ನೀಡುವ ಮೂಲಕ ಹಿಂದೂಗಳ ವಿಶ್ವಾಸಗಳಿಸುವ ಪ್ರಯತ್ನವನ್ನು ವರ್ಷದಿಂದ ಈಚೆಗೆ ನಡೆಸುತ್ತಾ ಬಂದಿದ್ದಾರೆ. ಇವರಿಬ್ಬರಲ್ಲಿ ಒಬ್ಬರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನುತ್ತವೆ ಪಕ್ಷದ ಮೂಲಗಳು.
‘ಈಗಾಗಲೇ ಅಧಿಕೃತ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಿದೆ. ನಾಳೆ ಅವರಿಗೆ ಬಿ–ಫಾರಂ ನೀಡುವ ಸಾಧ್ಯತೆ ಇದೆ. ಇಬ್ಬರ ನಡುವೆ ನಿಕಟ ಪೈಪೋಟಿ ಇರುವುದರಿಂದ ಒಬ್ಬರಿಗೆ ಟಿಕೆಟ್ ನೀಡಿದರೆ, ಇನ್ನೊಬ್ಬರು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಇಬ್ಬರಲ್ಲಿ ಒಬ್ಬರು ಪಕ್ಷವನ್ನು ತೊರೆದು ಬೇರೆ ಪಕ್ಷದಿಂದ ಕಣಕ್ಕಿಳಿದರೂ ಪಕ್ಷಕ್ಕೆ ನಷ್ಟವಾಗಲಿದೆ. ಹಾಗಾಗಿ ಎಚ್ಚರಿಕೆಯ ನಡೆಯನ್ನು ಇಡಬೇಕಿದೆ’ ಎಂದು ಪಕ್ಷದ ಪ್ರಮುಖರೊಬ್ಬರು ‘ಡಿಟಿವಿ’ಗೆ ತಿಳಿಸಿದರು.
ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಘೋಷನೆ ಬಾಕಿ:
ನಾಲ್ಕನೇ ಪಟ್ಟಿಯಲ್ಲೂ ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಾಗಿಲ್ಲ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಪ್ತರ ನಡುವೆ ಟಿಕೇಟ್ಗಾಗಿ ಪೈಪೋಟಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಕೃಷ್ಣೇಗೌಡ ಪರ ಸಿದ್ದರಾಮಯ್ಯ ಒಲವು ಹೊಂದಿದ್ದರೆ ಮಾಜಿ ಪೊಲೀಸ್ ಅದಿಕಾರಿ ಶ್ರೀಧರ್ ಗೌಡಗೆ ಟಿಕೇಟ್ ಕೊಡಬೇಕೆಂದು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ.