ಉಳ್ಳಾಲ: ಕಡಲ ಕಿನಾರೆಯ ಬಳಿ ಕಾರು, ಶೂ, ಮೊಬೈಲ್, ಪರ್ಸ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಉಚ್ಚಿಲ ಕಡಲ ಕಿನಾರೆಯಲ್ಲಿ ಗುರುವಾರ ಪತ್ತೆಯಾಗಿದ ಬಗ್ಗೆ ವರದಿಯಾಗಿದೆ.
ಉಳ್ಳಾಲ ಧರ್ಮನಗರ ನಿವಾಸಿ ವಸಂತ್ ಅಮೀನ್ (49) ಬುಧವಾರ ಸೋಮೇಶ್ವರದಿಂದ ತೆರಳಿದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದಾಗ ಕಾರು, ಶೂ, ಮೊಬೈಲ್ ಮತ್ತು ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು, ಈಜುಗಾರರಿಂದ ಸಮುದ್ರದಲ್ಲಿ ಶೋಧ ಕಾರ್ಯ ನಡೆಸಿದ್ದರು.
ಗುರುವಾರ ಮಧ್ಯಾಹ್ನ ಉಚ್ಚಿಲ ಕಡಲ ಕಿನಾರೆಯಲ್ಲಿ ವಿಹಾರಕ್ಕೆ ಬಂದಿದ್ದ ಜೋಡಿಯೊಂದು ನೀರಾಟಕ್ಕಿಳಿದಾಗ ಯುವಕನ ಕಾಲಿಗೆ ವಸಂತ್ ಅವರ ಮೃತದೇಹ ಸಿಕ್ಕಿಕೊಂಡಿದೆ. ಭಯಗೊಂಡ ಯುವಕನು ಬೊಬ್ಬೆ ಹಾಕಿದಾಗ ಅಲ್ಲೇ ಇದ್ದ ನಿವೃತ್ತ ಯೋಧರೊಬ್ಬರು ನೀರಿಗಿಳಿದು ಮೃತ ದೇಹವನ್ನ ಮೇಲಕ್ಕೆತ್ತಿದ್ದಾರೆ.
ಮೂಲತಃ ಉಳ್ಳಾಲ ಬಸ್ತಿಪಡ್ಪು ನಿವಾಸಿ ವಸಂತ್ ಅಮೀನ್ ತಿಂಗಳ ಹಿಂದಷ್ಟೆ ಉಳ್ಳಾಲದ ಧರ್ಮನಗರದಲ್ಲಿ ಮನೆ ನಿರ್ಮಿಸಿದ್ದರು.ನಿನ್ನೆ ಬೆಳಗ್ಗೆ ಮನೆಯಿಂದ ಹೊರಟ ವಸಂತ್ ಅವರು ಕಾರನ್ನು ಸೋಮೇಶ್ವರ ಕಡಲ ಕಿನಾರೆಯಲ್ಲಿ ನಿಲ್ಲಿಸಿ ರುದ್ರಪಾದೆಯಲ್ಲಿ ತನ್ನ ಸೊತ್ತುಗಳನ್ನ ಇರಿಸಿ ನಾಪತ್ತೆಯಾಗಿದ್ದರು. ಇಂದು ಮೃತದೇಹ ಪತ್ತೆಯಾಗಿದ್ದು ಮೃತದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.