ಪುತ್ತೂರು: ಚುನವಾಣೆಯ ರಂಗು ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಇದೀಗ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಪರವಾಗಿ ಮತ ಯಾಚನೆ ನಡೆಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮೇ 6 ರಂದು ಪುತ್ತೂರಿಗೆ ಆಗಮಿಸಲಿದ್ದು, ಪುತ್ತೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅವರ ಆಗಮನದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಅವರು ಪುತ್ತೂರಿಗೆ ಬೆಳಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಪುತ್ತೂರಿ ಮೊಟ್ಟೆತ್ತಡ್ಕದಲ್ಲಿ ಹೆಲಿಪ್ಯಾಡ್‍ನಲ್ಲಿ ಇಳಿಯಲಿದ್ದಾರೆ. ಬಳಿಕ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದು ಅಲ್ಲಿ ದೇವರ ದರ್ಶನ ಪಡೆದು ನಂತರ ದೇವಳದ ಬಳಿಯಲ್ಲಿರುವ ಮುಖ್ಯ ಅಂಚೆ ಕಚೇರಿ ಬಳಿಯಿಂದ ಕಿಲ್ಲೆ ಮೈದಾನದ ತನಕ ರೋಡ್ ಶೋ ನಡೆಸಲಿದ್ದಾರೆ. ಅಂಚೆ ಕಚೇರಿ ಬಳಿಯಿಂದ ಹೊರಟು ಕೋರ್ಟು ರಸ್ತೆಯಾಗಿ ಕಿಲ್ಲೆ ಮೈದಾನದ ತನಕ ಜಾಥಾ ನಡೆಯಲಿದೆ.
ಯಾವ ಭಾಗದಲ್ಲಿ ವಾಹನ ಸಂಚಾರ ನಿಷೇಧ/
ಆದಿತ್ಯನಾಥ್ ಆಗಮನದ ಹಿನ್ನಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಯ ದೃಷ್ಠಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧಿಸಲಾಗಿದೆ. ವಾಹನ ಪಾರ್ಕಿಂಗ್ ಹಾಗೂ ವಾಹನಗಳು ಬದಲಿ ರಸ್ತೆ ಮಾರ್ಗದ ಮೂಲಕ ಸಂಚರಿಸುವಂತೆ ದ.ಕ. ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಆದಿತ್ಯನಾಥ್ ಆಗಮಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿನೆಟ್ ಜಂಕ್ಷನ್‍ನಿಂದ ಮುಕ್ರಂಪಾಡಿ ತನಕ ಹಾಗೂ ಮುಕ್ರಂಪಾಡಿಯಿಂದ ಮೊಟ್ಟೆತ್ತಡ್ಕದ ತನಕ ರಸ್ತೆಯಲ್ಲಿ ತುರ್ತು ಮತ್ತು ವೈದ್ಯಕೀಯ ವಾಹನ ಹೊರತು ಪಡಿಸಿ ಇತರ ವಾಹನ ಸಂಚಾರ ನಿಷೇಧಿಸಲಾಗಿದೆ.
ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 2 ಗಂಟೆಯ ತನಕ ಬೊಳುವಾರು ಜಂಕ್ಷನ್‍ನಿಂದ ಗಾಂಧಿಕಟ್ಟೆಯ ತನಕ ಮತ್ತು ಕಿಲ್ಲೆ ಮೈದಾನದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಹಾಗೂ ಕೋರ್ಟ್ ರಸ್ತೆಯಲ್ಲಿ ತುರ್ತು ಮತ್ತು ವೈದ್ಯಕೀಯ ವಾಹನ ಹೊರತುಪಡಿಸಿ ಇತರ ವಾಹನ ಸಂಚಾರ ನಿಷೇಧಿಸಲಾಗಿದೆ.
ಬೆಳಗ್ಗೆಯಿಂದ ಕಾರ್ಯಕ್ರಮ ಮುಗಿಯುವ ತನಕ ಶ್ರೀಧರ ಭಟ್ ಜಂಕ್ಷನ್‍ನಿಂದ ಗಾಂಧಿಕಟ್ಟೆಯ ತನಕ ಹಾಗು ಗಾಂಧಿ ಕಟ್ಟೆಯಿಂದ ಕೋರ್ಟು ರಸ್ತೆಯ ಮೂಲಕ ಕಿಲ್ಲೆ ಮೈದಾನದ ತನಕ ಸುತ್ತ ಮುತ್ತಲಿನ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.
ಬದಲಿ ರಸ್ತೆಯ ವಿವರ/
ಮಂಗಳೂರು ಮತ್ತು ಕಡಬ ಕಡೆಯಿಂದ ಸಂಚರಿಸುವ ಲಘು ವಾಹನಗಳು ಹಾಗೂ ಸುಳ್ಯ ಮತ್ತು ಸಂಪ್ಯ ಕಡೆಗೆ ಸಂಚರಿಸಲು ಲಿನೆಟ್ ಜಂಕ್ಷನ್-ಬೊಳುವಾರು-ಕೊಟೇಚಾಹಾಲ್-ಸಾಲ್ಮರ-ಪುರುಷರಕಟ್ಟೆ, ಪಂಜಳ, ಪರ್ಪುಂಜ ಮಾರ್ಗವನ್ನು ಬಳಸುವುದು.
ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಲಘು ವಾಹನಗಳು ಪಪುಂಜ ಕ್ರಾಸ್-ಪಂಜಳ, ಪುರುಷರಕಟ್ಟೆ-ದರ್ಬೆ-ಅರುಣಾ ಥಿಯೇಟರ್-ಸಾಲ್ಮರ-ಪಡೀಲ್-ಬೊಳುವಾರು-ಲಿನೆಟ್ ಜಂಕ್ಷನ್ ಮಾರ್ಗವಾಗಿ ಸಂಚರಿಸುವುದು.
ಪಾರ್ಕಿಂಗ್ ವ್ಯವಸ್ಥೆ/
ಆದಿತ್ಯನಾಥ್ ಅವರ ಕಾರ್ಯಕ್ರಮಕ್ಕೆ ಆಗಮಿಸುವವರು ಒಂದು ಗಂಟೆಗೆ ಮುಂಚಿತವಾಗಿ ವಾಹನಗಳನ್ನು ಪುತ್ತೂರು ಶ್ರೀ ಮಹಾಲಿಗೇಶ್ವರ ದೇವಸ್ಥಾನದ ಗದ್ದೆಯಲ್ಲಿ, ಬಂಟರ ಭವನದ ಮುಂಬಾಗ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆಗೊಳಿಸಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಜಾಥಾ ಸಾಗುವ ದಾರಿಯಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಸೂಕ್ತ ಬಂದೋಬಸ್ತ್ ಹಿನ್ನೆಲೆಯಲ್ಲಿ ನಗರದಲ್ಲಿ 600ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆಯೆಂದು ವರದಿಯಲ್ಲಿ ತಿಳಿದು ಬಂದಿದೆ.