ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ರಾಜ್ಯದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ.
ಈ ಬಾರಿ ಶೇ. 83.89 ರಷು ಫಲಿತಾಂಶ ಬಂದಿದೆ. ಒಟ್ಟು 7 ಲಕ್ಷದ 619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಬಾಲಕರು ಶೇ. 80.08 ರಷ್ಟು ಉತ್ತೀರ್ಣರಾಗಿದ್ದಾರೆ. ಶೇಕಡಾ 87.87 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಶೇ.96 ದೊಂದಿಗೆ ಈ ಬಾರಿ ಎಸ್ ಎಸ್ ಎಲ್ ಫಲಿತಾಂಶದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮಂಡ್ಯ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಹಾಸನ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರು ಗ್ರಾ. ಜಿಲ್ಲೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಯಾದಗಿರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಉಡುಪಿ ಜಿಲ್ಲೆ 18ನೇ ಸ್ಥಾನವನ್ನು ಪಡೆದುಕೊಂಡಿದ್ದು, ದಕ್ಷಿಣ ಕನ್ನಡ 19ನೇ ಸ್ಥಾನವನ್ನು ಪಡೆದುಕೊಂಡಿದೆ.
ಎ+ ಗ್ರೇಡ್ ನಲ್ಲಿ ಒಟ್ಟು 61,003 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ರಾಜ್ಯದ 23 ಶಾಲೆಗಳು ಎ ಗ್ರೇಡ್ ಪಡೆದುಕೊಂಡಿದೆ. ನಾಲ್ವರು ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಸರ್ಕಾರಿ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದಿದ್ದು, ಖಾಸಗಿ ಮತ್ತು ಅನುದಾನಿತ ಶಾಲೆಗಳು ಸೇರಿ ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
ಫೇಲ್ ಆದ ವಿದ್ಯಾರ್ಥಿಗಳು ಎದೆಗುಂದುವ ಅವಶ್ಯಕತೆಯಿಲ್ಲ:
ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಕಟಿಸಿದ ಬಳಿಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಸುದ್ದಿಗೋಷ್ಟಿ ನಡೆಸಿದರು. ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಎದೆಗುಂದಬಾರದು. ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದವರೆಲ್ಲರೂ ಯಾವುದೋ ಒಂದು ಹಂತದಲ್ಲಿ ವೈಫಲ್ಯ ಅನುಭವಿಸಿರುತ್ತಾರೆ. ಫೇಲಾದವರಿಗೆ ನೆರವಾಗಲು ತಮ್ಮ ಶಿಕ್ಷಕವೃಂದ ಸದಾ ಸಿದ್ಧವಿದೆ. ಮೇ 15 ರೊಳಗೆ ಪೂರಕ ಪರೀಕ್ಷೆ ಫೀಸು ಪಾವತಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಬೇಕು, ಪರೀಕ್ಷಾ ವೇಳಾಪಟ್ಟಿಯನ್ನು ಇನ್ನೊಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ರಾಮಚಂದ್ರ ಹೇಳಿದರು.
ಇನ್ನು ಫೇಲ್ ಆದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯಪಡುವುದು ಬೇಡ. ಎಸ್ಎಸ್ಎಲ್ಸಿ ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ಪಾಲಿಗೆ ಮಹತ್ತರ ಘಟ್ಟ ಹೌದು, ಹಾಗಂತ ಇದು ಜೀವನದ ಅಂತಿಮವಲ್ಲ. ಪರೀಕ್ಷೆ ಎನ್ನುವುದು ವಿದ್ಯಾರ್ಥಿಗಳ ಜೀವನದ ಭಾಗವಷ್ಟೇ, ಪರೀಕ್ಷೆಯಲ್ಲಿ ಫೇಲ್ ಆದ ತಕ್ಷಣ ಜೀವನ ಮುಗಿಯಿತು ಎಂದಲ್ಲ. ಪೂರಕ ಪರೀಕ್ಷೆ ಬರೆಯಹುದು.
2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಇಂದಿನಿಂದ ಮೇ 15ರವರೆಗೆ ಅವಕಾಶ ನೀಡಲಾಗಿದೆ. ಇನ್ನು ಪೂರಕ ಪರೀಕ್ಷೆ ಯಾವಾಗ ನಡೆಯಲಿದೆ ಎನ್ನುವುದನ್ನು ಶಿಕ್ಷಣ ಇಲಾಖೆ ಮುಂದಿನ ವಾರ ವೇಳಾಪಟ್ಟಿ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಹಳೆಯದ್ದನ್ನು ಮರೆತು ಪೂಕರ ಪರೀಕ್ಷೆಗೆ ನೋಂದಾಣಿ ಮಾಡಿಕೊಳ್ಳಿ