ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ನವೀನ್ ಉಲ್ ಹಕ್ಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ.
ಅಫ್ಘಾನಿಸ್ತಾನ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ನವೀನ್ ಉಲ್ ಹಕ್ ಈ ಬಾರಿಯ ಐಪಿಎಲ್ಗೆ ಆಯ್ಕೆಯಾಗಿದ್ದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಯುವ ವೇಗಿ ವಿರಾಟ್ ಕೊಹ್ಲಿ ಜೊತೆಗಿನ ವಾಕ್ಸಮರದಿಂದ ಭಾರೀ ಸುದ್ದಿಯಾಗಿದ್ದರು.

ಇದೀಗ ಜೂನ್ 2 ರಿಂದ ಶುರುವಾಗಲಿರುವ ಏಕದಿನ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ನವೀನ್ ಉಲ್ ಹಕ್ ಅವರನ್ನು ಪರಿಗಣಿಸಲಾಗಿಲ್ಲ. ಅಲ್ಲದೆ ನವೀನ್ ಬದಲಿಗೆ ಅನ್‌ಕ್ಯಾಪ್ಡ್ ಯುವ ವೇಗಿ ಅಬ್ದುಲ್ ರಹಮಾನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಇತರೆ ಅಫ್ಘಾನ್ ಆಟಗಾರರಾದ ರಶೀದ್ ಖಾನ್ (ಗುಜರಾತ್ ಟೈಟಾನ್ಸ್), ರಹಮಾನುಲ್ಲಾ ಗುರ್ಬಾಝ್ (ಕೆಕೆಆರ್), ಫಝಲ್ಹಕ್ ಫಾರೂಕಿ (ಎಸ್ಆರ್ಹೆಚ್) ಹಾಗೂ ನೂರ್ ಅಹ್ಮದ್ (ಗುಜರಾತ್ ಟೈಟಾನ್ಸ್) ಏಕದಿನ ಸರಣಿಗಾಗಿ ಆಯ್ಕೆಯಾಗಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಈ ಸರಣಿಯು ಜೂನ್ 2, 4 ಮತ್ತು 7 ರಂದು ನಡೆಯಲಿದ್ದು, ಇದಾದ ಬಳಿಕ ಅಫ್ಘಾನ್ ತಂಡ ಭಾರತದ ವಿರುದ್ಧ ಏಕದಿನ ಸರಣಿ ಆಡುವ ಸಾಧ್ಯತೆಯಿದೆ.
ಅಫ್ಘಾನಿಸ್ತಾನ ಏಕದಿನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ (ಉಪನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್‌ಕೀಪರ್), ಇಬ್ರಾಹಿಂ ಝದ್ರಾನ್, ರಿಯಾಝ್ ಹಸನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆಟ್‌ಕೀಪರ್), ಅಝ್ಮತುಲ್ಲಾ ಉಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಅಬ್ದುಲ್ ರಹಮಾನ್, ಫಝಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್.| ಮೀಸಲು ಆಟಗಾರರು: ಗುಲ್ಬದಿನ್ ನೈಬ್, ಶಾಹಿದುಲ್ಲಾ ಕಮಾಲ್, ಯಾಮಿನ್ ಅಹ್ಮದ್ಝೈ, ಝಿಯಾ ಉರ್ ರೆಹಮಾನ್ ಅಕ್ಬರ್


