ಚಿಕ್ಕಬಳ್ಳಾಪುರ : ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಹೊಟೇಲ್ಗೆ ಹೋಗಿದ್ದಕ್ಕೆ ಮುಸ್ಲಿಂ ಯುವಕರ ತಂಡ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಘಟನೆ ಮೇ 24 ರಂದು ಚಿಕ್ಕಬಳ್ಳಾಪುರದ ಗೋಪಿಕಾ ಚಾಟ್ಸ್ ಬಳಿ ನಡೆದಿದೆ.
ಪ್ರಕರಣ ಸಂಬಂಧ ನೊಂದ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ನಕ್ಕಲಕುಂಟೆ ನಿವಾಸಿಗಳಾದ ವಾಯಿದ್ (20) ಹಾಗೂ ಸದ್ದಾಂ (21) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಇಮ್ರಾನ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕ ಜೊತೆಯಾಗಿ ಹೊಟೇಲ್ಗೆ ಹೋಗಿದ್ದಾರೆ. ಈ ವೇಳೆ ಆಗಮಿಸಿದ ಮುಸ್ಲಿಂ ಯುವಕರ ತಂಡ ಹೊಟೇಲ್ ಟೇಬಲ್ ಬಳಿ ಬಂದು ವಾರ್ನ್ ಮಾಡಿದ್ದಾರೆ, ನಂತರ ಜೋಡಿ ಹೊರಬರುವುದನ್ನೇ ಕಾಯುತ್ತಿದ್ದ ತಂಡ, ಇಬ್ಬರು ಹೊರಬರುತ್ತಿದ್ದಂತೆ ಪ್ರಶ್ನಿಸಿ ಹಲ್ಲೆಗೆ ಯತ್ನ ನಡೆಸಿದೆ. ಮುಸ್ಲಿಂ ಧರ್ಮದಲ್ಲಿ ಹುಟ್ಟಿ ಹಿಂದೂ ಯುವಕನ ಜೊತೆ ಹೋಗುತ್ತೀಯಾ ಎಂದು ಯುವತಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಯುವಕನನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ.
ದುಷ್ಕರ್ಮಿಗಳ ಕೃತ್ಯಕ್ಕೆ ಕುಪಿತಗೊಂಡ ಮುಸ್ಲಿಂ ಯುವತಿ ಪ್ರತಿರೋಧ ಒಡ್ಡಿದ್ದಾಗ ಆಕೆಯನ್ನು ಅವಮಾನಿಸಲು ಯತ್ನಿಸಿದ್ದಾರೆ. ಈ ವೇಳೆ ಕೆಟ್ಟದಾಗಿ ಬೈದರೆ ಸರಿ ಇರಲ್ಲಾ ಅಂತ ಯುವತಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಅಲ್ಲದೆ, ಹಿಂದೂ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಚಿಕ್ಕಬಳ್ಳಾಫುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮುಸ್ಲಿಂ ಯುವಕರ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆರಂಭದಲ್ಲಿ ಯುವಕರ ದೌರ್ಜನ್ಯದ ಬಗ್ಗೆ ಪ್ರಶ್ನಿಸಿದ್ದ ಯುವತಿಗೆ ಬಲವಂತವಾಗಿ ಕ್ಷಮಾಪಣೆ ಕೇಳಿಸಿದ್ದಾರೆ. ವಿಡಿಯೋದಲ್ಲಿ ಇರುವಂತೆ, ನನ್ನಿಂದ ತಪ್ಪಾಯಿತು, ಇನ್ನು ಮುಂದೆ ಹೀಗೆ ಮಾಡಲ್ಲ ಎಂದು ಯುವತಿ ಹೇಳಿದ್ದಾಳೆ. ಇದೇ ವೇಳೆ ಯುವಕನೊಬ್ಬ ಅಲ್ಲಿದ್ದವರೆಲ್ಲ ನನ್ನ ಅಣ್ಣತಮ್ಮಂದಿರು ಎಂದು ಹೇಳುವಂತೆ ಬಲವಂತ ಮಾಡಿರುವುದು ಕೇಳಿಸಿದೆ. ಅದೇ ರೀತಿ ಯುವತಿ ಕೂಡ ಹೇಳುವುದನ್ನು ನೋಡಬಹುದು.
ಮೇ 23ರಂದು ಹಿರಿಯ ಪೊಲೀಸರ ಜೊತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ನೈತಿಕ ಪೊಲೀಸ್ ಗಿರಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದರು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಆಯಾ ವಿಭಾಗದ ಡಿಸಿಪಿ ಹಾಗೂ ಎಸ್ಪಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಇದಾದ ಮರುದಿನವೇ ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ.
ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ;
ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ವಾಯಿದ್ ಮತ್ತು ಸದ್ದಾಂ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯದೀಶರ ಗೃಹ ಕಚೇರಿಗೆ ಹಾಜರು ಮಾಡಿದ್ದರು. ಅದರಂತೆ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾ. ಬಾಲಪ್ಪ ಅಪ್ಪಣ್ಣ ಜರಗು ಅವರು ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯ ಬಂಧನಕ್ಕೆ ಶೋಧ ಮುಂದುವರಿದಿದೆ.