ಟಿಪ್ಪು ಸುಲ್ತಾನ್.. ಈ ಹೆಸರು ಕೇಳಿದ್ರೆನೇ ಎಂತವರ ಕಿವಿ ಕೂಡ ಒಂದು ಸಲ ನೆಟ್ಟಗಾಗುತ್ತೆ. ತಾನು ಮೃತಪಟ್ಟು 200-300 ವರ್ಷಗಳು ಕಳೆದರೂ ಕೂಡ ಇಂದಿಗೂ ಸದಾ ಪ್ರಚಲಿತದಲ್ಲಿದ್ದು ಮತ್ತು ಆಗಾಗ ವಿವಾದಗಳಿಗೆ ಎಡೆ ಮಾಡುತ್ತಿರುವ ಟಿಪ್ಪು ಸುಲ್ತಾನ್ ಒಂದು ಕಾಲದ ಮೈಸೂರು ಹುಲಿ ಎಂದೇ ಕರೆಸಿಕೊಂಡಿದ್ದ ಮೈಸೂರಿನ ದೊರೆ. ಕಳೆದ ಕೆಲ ವರ್ಷಗಳಿಂದ ರಾಜಕೀಯ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದ ಟಿಪ್ಪು ಸುಲ್ತಾನ್ ಹೆಸರು ಈಗ ಮತ್ತೊಂದು ಬೇರೆ ವಿಷಯಕ್ಕೆ ಸುದ್ದಿಯಾಗಿದೆ.
ಹೌದು. 18ನೇ ಶತಮಾನದಲ್ಲಿ ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಅನೇಕ ವಸ್ತುಗಳನ್ನು ಅಲ್ಲಲ್ಲಿ ವಸ್ತು ಸಂಗ್ರಹಾಲಯಗಳಲ್ಲಿ ಕಾಪಾಡಿಕೊಂಡು ಬರಲಾಗಿದೆ. ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಖಡ್ಗವನ್ನು ಇತ್ತೀಚೆಗೆ ಅಂದರೆ 2004ರಲ್ಲಿ ಮದ್ಯದ ದೊರೆಯಾಗಿದ್ದ ವಿಜಯ್ ಮಲ್ಯ ಖರೀದಿಸಿದ್ದರು. ಆಗ 1.5 ಕೋಟಿ ರೂಪಾಯಿ ನೀಡಿ ಖರೀದಿಸಿದ್ದ ಟಿಪ್ಪು ಸುಲ್ತಾನ್ ಖಡ್ಗವು ವಿಜಯ್ ಮಲ್ಯ ಜೊತೆ ಇತ್ತು. ಇದೀಗ ಆ ಖಡ್ಗವನ್ನು ಹರಾಜಿಗೆ ಹಾಕಲಾಗಿದೆ.
ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಖಡ್ಗವನ್ನು ಲಂಡನ್‌ನಲ್ಲಿ ಹರಾಜಿಗೆ ಹಾಕಲಾಗಿದ್ದು, ಇತ್ತೀಚೆಗೆ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್ ($ 17.4 ಮಿಲಿಯನ್) ಅಂದರೆ ಭಾರತೀಯ ಮೌಲ್ಯದಲ್ಲಿ ಬರೋಬ್ಬರಿ 140 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಆ ಮೂಲಕ ಟಿಪ್ಪು ಸುಲ್ತಾನ್ ಕತ್ತಿಯ ಬೆಲೆ ಈ ಹಿಂದಿಗಿಂತ ಏಳು ಪಟ್ಟು ಹೆಚ್ಚಾಗಿದೆ. ಆಕ್ಷನ್ ಹೌಸ್ ಬೋನ್‌ಹಾಮ್ಸ್ ಹರಾಜು ಕರೆದಿತ್ತು. ಇದೀಗ ಆ ಹರಾಜಿನಲ್ಲಿ ಮಾರಾಟ ಆಗಿರುವ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೇ, ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಈ ಖಡ್ಗವು ಅತ್ಯಂತ ಪ್ರಮುಖವಾಗಿದೆ ಎಂದು ಬೊನ್ಹಾಮ್ಸ್ ಹೇಳಿದೆ.