ಉಳ್ಳಾಲ: ಗುಡ್ಡ ಭಾಗಕ್ಕೆ ತ್ಯಾಜ್ಯ ಎಸೆಯಲು ಬಂದ ಮಹಿಳೆಯ ಮೇಲೆ ವ್ಯಕ್ತಿಯೋರ್ವ ವಿನಾಕಾರಣ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಉಳ್ಳಾಲ ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಹೈದರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂಬೇಡ್ಕರ್ ನಗರದ ಮಹಿಳೆಯೋರ್ವರು ಶುಕ್ರವಾರ ಸಂಜೆ ವೇಳೆ ತಮ್ಮ ಮನೆಯ ಸಮೀಪವಿರುವ ಗುಡ್ಡ ಭಾಗಕ್ಕೆ ಕಸ ಎಸೆಯಲು ತೆರಳಿದ್ದಾರೆ. ಈ ವೇಳೆ ಮಹಿಳೆಯನ್ನು ತಡೆದ ಹೈದರ್, ಇಲ್ಲಿ ಯಾಕೆ ಕಸ ಎಸೆಯುತ್ತೀರಿ ಎಂದು ಪ್ರಶ್ನಿಸಿ ಕೆಟ್ಟದಾಗಿ ನಿಂದಿಸಿದ್ದಾರೆ. ಅಲ್ಲದೆ ಕೆಳಕ್ಕೆ ದೂಡಿ ಹಾಕಿ ಹೊಟ್ಟೆ ಭಾಗಕ್ಕೆ ತುಳಿದಿದ್ದಾರೆ. ಬಳಿಕ ಚೂರಿ ತೋರಿಸಿ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.
‘ ಮನೆಗೆ ಕಸದ ವಾಹನ ಬಾರದೆ 4 ದಿನಗಳಾಗಿತ್ತು. ಹೀಗಾಗಿ ಗುಡ್ಡಕ್ಕೆ ಕಸ ಎಸೆಯಲು ಹೋಗಿದ್ದೇನೆ. ಈ ವೇಳೆ ಹೈದರ್ ಕೆಟ್ಟದಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಈ ಮೊದಲು ಕೂಡಾ ಇದೆ ರೀತಿ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.