ಮಂಗಳೂರು: ಸಮುದ್ರ ವಿಹಾರಕ್ಕೆಂದು ಸೋಮೇಶ್ವರ ಬೀಚ್ ಬಂದಿದ್ದ ಕಾಲೇಜ್ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಇಂದು ಸಂಜೆ ನಡೆದಿದೆ.
ಉಳ್ಳಾಲದ ಸೋಮೇಶ್ವರಕ್ಕೆ ಸಮುದ್ರ ವಿಹಾರಕ್ಕೆಂದು ಬಂದಿದ್ದ ವಿದ್ಯಾರ್ಥಿಗಳನ್ನು ಹಿಂಬಾಲಿಸಿದ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ.
ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಕೇರಳ ಮೂಲದ ಆರು ಮಂದಿ ವಿದ್ಯಾರ್ಥಿಗಳು ವಿಹಾರಕ್ಕೆಂದು ಸೋಮೇಶ್ವರ ಕಡಲ ತೀರಕ್ಕೆ ಬಂದಿದ್ದರು. ಮೂವರು ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂಬುದನ್ನು ಗಮನಿಸಿದ ಸಂಘಪರಿವಾರದ ಕಾರ್ಯಕರ್ತರು ಹಿಂಬಾಲಿಸಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೊತೆಗಿದ್ದ ಮೂವರು ವಿದ್ಯಾರ್ಥಿನಿಯರು ವಾಪಸ್ ಊರಿಗೆ ತೆರಳಿದ್ದಾರೆಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನಿಡಿದ್ದಾರೆ. ಸೋಮೇಶ್ವರ ಸಮುದ್ರ ತೀರದಲ್ಲಿ ಉಳ್ಳಾಲ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್ಗಿರಿಗೆ ಅವಕಾಶ ಇಲ್ಲ, ಹೀಗೆ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಇತ್ತೀಚೆಗೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು. ಬಳಿಕ ಅಧಿಕಾರಿಗಳು ಕೂಡ ನೈತಿಕ ಪೊಲೀಸ್ ಗಿರಿ ನಡೆಸುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು.