ಬೆಂಗಳೂರು: ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ ಅದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಘಟನೆ ನಡೆದುಹೋಗಿದೆ ತಾನು ಪ್ರೀತಿಸಿದ ಹುಡುಗಿಯನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಜೀವನ್ ಭಿಮಾ ನಗರದ ಕೋಡಿಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಕೊಲೆಯಾದ ಯುವತಿಯನ್ನು ಹೈದರಾಬಾದ್ ಮೂಲದ ಆಕಾಂಕ್ಷ ಎಂದು ತಿಳಿದು ಬಂದಿದೆ.ಈಕೆಯನ್ನು ಕೊಲೆಗೈದ ಆರೋಪಿಯನ್ನು ದೆಹಲಿ ಮೂಲದ ಅರ್ಪಿತ್ ಎಂದು ಗುರುತಿಸಲಾಗಿದೆ.
ಈ ಹಿಂದೆ ಆಕಾಂಕ್ಷಾ ಹಾಗೂ ಅರ್ಪಿತ್ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕೆಲಸ ಬದಲಾವಣೆ ಮಾಡಿ ಬೇರೆ ಬೇರೆ ಕಡೆ ಕೆಲಸಕ್ಕೆ ಸೇರಿಕೊಂಡಿದ್ದರು. ಯುವತಿ ಬಿಕಾಂ ವ್ಯಾಸಂಗ ಮಾಡಿ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದರೆ ಇಬ್ಬರು ಒಟ್ಟಿಗೆ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು ಈ ವೇಳೆ ಇಬ್ಬರು ಬೇರೆಯಾಗಬೇಕು ಎಂದು ಮಾತಾಡಿಕೊಂಡಿದ್ದರು. ಇದಾದ ಬಳಿಕ ಸೋಮವಾರ ಇಬ್ಬರು ಮನೆಯಲ್ಲಿ ಇರುವಾಗ ಗಲಾಟೆ ಶುರುವಾಗಿದೆ. ಬಳಿಕ ಯುವತಿಯನ್ನು ಅರ್ಪಿತ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಕೊಂದ ಬಳಿಕ ಯುವತಿಯ ಕುತ್ತಿಗೆಗೆ ಬಟ್ಟೆ ಕಟ್ಟಿ ನೇಣು ಹಾಕಿಕೊಂಡು ಸಾವನಪ್ಪಿರುವ ರೀತಿ ಬಿಂಬಿಸುವ ಯತ್ನ ಮಾಡಿದ್ದಾನೆ. ಆದರೆ ಮೃತದೇಹವನ್ನು ಫ್ಯಾನ್ ಗೆ ಕಟ್ಟಲಾಗದೆ ನೆಲದ ಮೇಲೆ ಬಿಟ್ಟು ಮನೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ರಾತ್ರಿ ಮತ್ತೋರ್ವ ರೂಮೆಟ್ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೊದಲು ಅನುಮಾನಾಸ್ಪದ ಸಾವು ಎಂದುಕೊಂಡಿದ್ದ ಪೊಲೀಸರಿಗೆ ಸ್ಥಳ ಪರಿಶೀಲನೆ ಬಳಿಕ ಕೊಲೆ ಎಂಬುದು ಬೆಳಕಿಗೆ ಬಂದಿದೆ.ಸದ್ಯ ಜೀವನ್ ಭಿಮಾ ನಗರ ಪೊಲೀಸರು ಆರೋಪಿ ವಿರುದ್ಧ ಕೊಲೆ ಕೇಸ್ ದಾಖಲು ಮಾಡಿದ್ದಾರೆ ಆರೋಪಿಯು ಪರಾರಿಯಾಗಿದ್ದಾನೆ.