ಕಳೆದ ಒಂದಷ್ಟು ದಿನಗಳಿಂದ ‘2018’ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಯಾವುದೇ ದೊಡ್ಡ ಮಟ್ಟದ ಪ್ರಚಾರ ಇಲ್ಲದೇ ಬಿಡುಗಡೆ ಆದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ನೋಡನೋಡುತ್ತಿದ್ದಂತೆಯೇ ಈ ಸಿನಿಮಾದ ಕಲೆಕ್ಷನ್ 100 ಕೋಟಿ ರೂಪಾಯಿ ಆಗಿತ್ತು. ನಂತರ 150ಕ್ಕೆ ಏರಿಕೆ ಆಯಿತು. ಈಗ ಬರೋಬ್ಬರಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶ್ವ ಮಾರುಕಟ್ಟೆಯಲ್ಲಿ 200 ಕೋಟಿ ರೂಪಾಯಿ ಗಳಿಸಿದ ಮೊದಲ ಮಲಯಾಳಂ ಸಿನಿಮಾ ಎಂಬ ಖ್ಯಾತಿಗೆ ‘2018’ ಸಿನಿಮಾ ಪಾತ್ರವಾಗಿದೆ. ಕೇರಳದಲ್ಲಿನ ಘಟಾನುಘಟಿ ಸ್ಟಾರ್ ನಟರ ಸಿನಿಮಾಗಳಿಂದಲೂ ಸಾಧ್ಯವಾಗಿರದ ಸಾಧನೆಯನ್ನು ಈ ಚಿತ್ರ ಮಾಡಿದೆ. ಅಷ್ಟಕ್ಕೂ ಈ ಸಿನಿಮಾ ಬಗ್ಗೆ ಜನರಿಗೆ ಈ ಪರಿ ಕ್ರೇಜ್ ಮೂಡಲು ಕಾರಣ ಏನು? ಈ ಚಿತ್ರದ ಕಥೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..
‘2018’ ಚಿತ್ರದಲ್ಲಿ ಟೊವಿನೋ ಥಾಮಸ್ ಅವರು ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಅವರ ಜೊತೆ ಆಸಿಫ್ ಅಲಿ, ಅಪರ್ಣಾ ಬಾಲಮುರಳಿ, ವಿನೀತ್ ಶ್ರೀನಿವಾಸನ್, ಕಲೈಯರಸನ್, ಸುದೇಶ್, ಅಜು ವರ್ಗೀಸ್, ತನ್ವಿ ರಾಮ್, ಗೌತಮಿ ನಾಯರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೂಡ್ ಆಂಥೊನಿ ಜೋಸೆಫ್ ಅವರು ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶಕ ನೋಬಿನ್ ಪೌಲ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರವಾಹದ ಕಥೆ ಹೊಂದಿರುವ ‘2018’ ಚಿತ್ರ:
2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿ ‘2018’ ಸಿನಿಮಾ ಸಿದ್ಧವಾಗಿದೆ. ಹಲವರ ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಘಟನೆಗಳನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ಅತಿ ಕಷ್ಟದ ಸಂದರ್ಭದಲ್ಲಿ ಕೇರಳದ ಪ್ರತಿಯೊಬ್ಬರು ಹೇಗೆ ನಡೆದುಕೊಂಡರು ಎಂಬ ವಿವರ ಈ ಸಿನಿಮಾದಲ್ಲಿ. ‘ಪ್ರತಿಯೊಬ್ಬರೂ ಹೀರೋ’ ಎಂಬ ಟ್ಯಾಗ್ಲೈನ್ ಗಮನ ಸೆಳೆದಿದೆ. 2018ರ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾದರು. 1924ರ ಬಳಿಕ ಕೇರಳದಲ್ಲಿ ಉಂಟಾದ ಅತಿ ಭೀಕರ ಪ್ರವಾಹ ಅದು.
2018’ ಚಿತ್ರಕ್ಕೆ ಸುದೀಪ್ ಮೆಚ್ಚುಗೆ:
ಇತ್ತೀಚೆಗೆ ಈ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದರು. ‘ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ‘2018’ ಸಿನಿಮಾ ಕನ್ನಡಿಗರ ಹೃದಯವನ್ನೂ ಗೆಲ್ಲುತ್ತಿದೆ. ಅಭಿನಂದನೆಗಳು’ ಎಂದು ಸುದೀಪ್ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಇದು ನಿಜವಾದ ಕೇರಳ ಸ್ಟೋರಿ’ ಎಂದು ಅಭಿಮಾನಿಗಳು ಕಮೆಂಟ್ ಬಾಕ್ಸ್ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ನಿಮ್ಮ ಪ್ರೀತಿಗೆ ಧನ್ಯವಾದಗಳು. ಇಷ್ಟೇ ನಮಗೆ ಬೇಕಿರುವುದು’ ಎಂದು ಕೇರಳದಲ್ಲಿನ ಫ್ಯಾನ್ಸ್ ಕೂಡ ಕಮೆಂಟ್ ಮಾಡಿದ್ದಾರೆ.
ಮೊದಲು ಮಲಯಾಳಂನಲ್ಲಿ ಮಾತ್ರ ಬಿಡುಗಡೆಯಾದ ಈ ಸಿನಿಮಾ ನಂತರ ತೆಲುಗು, ಕನ್ನಡ, ಹಿಂದಿ, ತಮಿಳು ಭಾಷೆಗಳಿಗೆ ಡಬ್ ಆಗಿ ತೆರೆ ಕಂಡಿತು. ಕನ್ನಡಿಗರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈಗ ‘2018’ ಸಿನಿಮಾ ‘ಸೋನಿ ಲಿವ್’ ಒಟಿಟಿಯಲ್ಲೂ ವೀಕ್ಷಣೆಗೆ ಲಭ್ಯವಾಗಿದೆ. ಆ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುತ್ತಿದೆ.