ಪುತ್ತೂರು: ಮುಂದಿನ ಹದಿನೈದು ದಿನದೊಳಗೆ ನನ್ನ ನೂತನ ಕಚೇರಿ ಪುತ್ತೂರಿನಲ್ಲಿ ಪ್ರಾರಂಭವಾಗಲಿದ್ದು ಸರಕಾರಿ ಆಸ್ಪತ್ರೆಯ ಬಳಿ ಇರುವ ಈಗಿನ ಪುಡಾ ಕಟ್ಟಡದಲ್ಲಿ ನೂತನ ಕಚೇರಿ ಕಾರ್ಯಾರಂಭಿಸಲಿದೆ ಎಂದು ಶಾಸಕರಾದ ಅಶೋಕ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಕಚೇರಿಯಲ್ಲಿ ಸಾರ್ವಜನಿಕರ ಸೇವೆಗಾಗಿ ೬ ಮಂದಿ ಸಿಬಂದಿಯನ್ನು ನೇಮಕ ಮಾಡಲಿದ್ದು ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕರಿಸಲು, ಮಾಹಿತಿ ನೀಡಲು, ಜನರಿಗೆ ಸ್ಪಂದನೆ ನೀಡಲು ಮತ್ತು ನಗರಸಭಾ ವ್ಯಾಪ್ತಿಯಲ್ಲಿರುವ ಜನರಿಗೆ ಸೇವೆ ಸಲ್ಲಿಸಲು ಬೇರೆ ಬೇರೆ ಕೌಂಟರ್‌ಗಳನ್ನು ಮಾಡಿ ಕಚೇರಿಯಲ್ಲಿ ಸಿಬಂದಿಗಳು ಸೇವೆ ಸಲ್ಲಿಸಲಿದ್ದಾರೆ. ಕಚೇರಿಗೆ ಬರುವ ಮಂದಿಗೆ ಕಚೇರಿಯಲ್ಲಿ ಶಾಸಕರಿಲ್ಲದೇ ಇದ್ದರೂ ಅವರ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಬೇಕು ಮತ್ತು ಶಾಸಕರಿಲ್ಲದಿರುವ ಸಂದರ್ಭದಲ್ಲಿ ಬಂದ ಜನರಿಗೆ ಕೆಲಸ ಆಗಿಲ್ಲ ಎಂದು ಯಾರೂ ನೊಂದು ಕೊಳ್ಳುವಂತಾಗಬಾರದು. ದೂರದ ಊರುಗಳಿಂದ ಶಾಸಕರನ್ನು ಭೇಟಿಯಾಗಲು ಬಂದಾಗ ಶಾಸಕರ ಬಳಿ ತಮ್ಮ ಕೆಲಸ ಆಗಿಲ್ಲ ಎಂದು ಯಾರೂ ಬರಿಗೈಯ್ಯಲ್ಲಿ ತೆರಳುವಂತಾಗಬಾರದು ಎಂಬ ಉದ್ದೇಶದಿಂದ ಕಚೇರಿಯಲ್ಲಿ ಎಲ್ಲಾ ಸೇವೆಗಳನ್ನು ನೀಡುವ ಈ ಒಂದು ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಕೊಡಿಂಬಾಡಿ ತಿಳಿಸಿದ್ದಾರೆ.