ಪುತ್ತೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು, ರೋಟರಿ ಕ್ಯಾಂಪ್ಕೊ ರಕ್ತ ನಿಧಿ ಪುತ್ತೂರು ಸಹಯೋಗದಲ್ಲಿ, ರೋಟರಿ ಕ್ಲಬ್ ಪುತ್ತೂರು ಹಾಗೂ ಸ್ವಯಂಪ್ರೇರಿತ ನಿಯಮಿತ ದಾನಿಗಳ ಸಹಕಾರದೊಂದಿಗೆ ಜಾಗತಿಕ ರಕ್ತದಾನಿಗಳ ದಿನದ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ರೋಟರಿ ಕ್ಯಾಂಪ್ಕೊ ರಕ್ತ ನಿಧಿ ಪುತ್ತೂರಿನಲ್ಲಿ ಇಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಂತೋಷ್ ಶೆಟ್ಟಿ ವಹಿಸಿದ್ದರು.
ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಜಲಾಲಿ ಉಸ್ತಾದ್ ಹಾಗೂ ಮ್ಯಾದೇ ದೇವುಸ್ ಚರ್ಚ್ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್ ರವರ ದಿವ್ಯ ಹಸ್ತದಿಂದ ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ಉದ್ಘಾಟನೆ ನಂತರ ಮಾತನಾಡಿದ ಮುಹಿಯದ್ದೀನ್ ಜುಮಾ ಮಸೀದಿ ಕಕ್ಕಿಂಜೆ ಖತೀಬರಾದ ಸಿದ್ದೀಕ್ ಜಲಾಲಿ ಉಸ್ತಾದರು, ನಾವು ಇಂದು ಮಾಡುವ ಒಳ್ಳೆಯ ಕೆಲಸದ ಪ್ರತಿಫಲದಿಂದ ನಮ್ಮ ಮಕ್ಕಳು, ಕುಟುಂಬಸ್ಥರಿಗೆ ಪುಣ್ಯ ಸಿಗುತ್ತದೆ. ರಾಜಕೀಯ, ಪಕ್ಷ, ಜಾತಿ, ಭೇದವಿಲ್ಲದೆ ಅಗತ್ಯ ಸಮಯದಲ್ಲಿ ಎಲ್ಲರಿಗೂ ಉಪಯೋಗವಾಗುವಂತಹ ರಕ್ತವನ್ನು ನಾವು ದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಅವರು ತಿಳಿಸಿದರು.
ನಂತರ ಮಾತನಾಡಿದ ಮ್ಯಾದೆ ದೇವುಸ್ ಚರ್ಚ್ ಧರ್ಮಗುರುಗಳಾದ ಲಾರೆನ್ಸ್ ಮಸ್ಕರೇನ್ಹಸ್, ಇತರರ ನೋವನ್ನು ಅರಿತು, ಅವರ ಹಸಿವನ್ನು ನೀಗಿಸುವ, ಇತರರ ಕಷ್ಟಗಳನ್ನು ಕಡಿಮೆ ಮಾಡಿಸುವಂತರ ಅವಕಾಶಗಳು ನಮಗೆ ಬಹಳಷ್ಟು ಸಿಗುತ್ತಿದ್ದು, ಇನ್ನೊಬ್ಬರಿಗೆ ಒಳಿತನ್ನು ಮಾಡುವ ಜೀವನ ಕ್ರಮ ನಾವೆಲ್ಲರೂ ರೂಡಿಸಿಕೊಳ್ಳಬೇಕು ಎಂದರು. ರಕ್ತದಾನದ ಬಗ್ಗೆ ಇನ್ನಷ್ಟು ಜನರಿಗೆ ಜಾಗೃತಿ ಬರಲಿ . ಹೆಚ್ಚೆಚ್ಚು ಜನರು ರಕ್ತದಾನ ಮಾಡುವ ಮುಖಾಂತರ ಕಷ್ಟದಲ್ಲಿರುವ ಜನರಿಗೆ ನೆರವಾಗಲಿ ಎಂದು ಆಶಿಸಿದರು. ನಿರಂತರವಾಗಿ ಜೀವದಾನ ಕಾರ್ಯ ಮಾಡುತ್ತಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸರ್ವರಿಗೂ ಅಭಿನಂದನೆ, ದೇವರು ನಿಮಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ಡಿ ಪಿಐ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಸಾಗರ್ ಮಾತನಾಡಿ, ರಕ್ತದ ಅಭಾವ ಹೆಚ್ಚುತ್ತಿರುವ ಪ್ರಸಕ್ತ ಸಂದರ್ಭದಲ್ಲಿ, ರಕ್ತದಾನ ಶಿಬಿರ ಮಾಡುತ್ತಾ ಬಡ ರೋಗಿಗಳ ಪಾಲಿಗೆ ನೆರವಾಗುತ್ತಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಗೆ ಶುಭಹಾರೈಸಿದರು. ದೇವರು ಮೆಚ್ಚುವಂತಹ ಇನ್ನಷ್ಟು ಪುಣ್ಯದ ಕೆಲಸಗಳು ನಿಮ್ಮಿಂದಾಗಲಿ ಎಂದು ಹೇಳಿದರು.
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ್ ಶೆಟ್ಟಿ ಮಾತನಾಡಿ, ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಾಗ ಅದನ್ನು ಒದಗಿಸುವಂತಹ ನಿಟ್ಟಿನಲ್ಲಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರಕ್ತದಾನ ಶಿಬಿರವನ್ನು ಆಯೋಜಿಸುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು.
ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಇದರ ಅಧ್ಯಕ್ಷರಾಗಿರುವ ಅಶ್ರಫ್ ಕಲ್ಲೇಗ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪ್ಯಾಟ್ರಿಕ್ ಸಿಪ್ರಿಯಸ್ ಮಸ್ಕರೇನ್ಹಸ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಶಾಂತ್ ಶೆಟ್ಟಿ, ಶ್ರೀ ಪ್ರಸಾದ್ ಪಾಣಾಜೆ, ಫಾರೂಕ್ ಬಾಯಬೆ, ಸಿದ್ದೀಕ್ ಪುತ್ತೂರು, ಡಾ.ರಾಮಚಂದ್ರ ಭಟ್, ಗಣೇಶ್ ಭಟ್, ಶರೀಫ್ ಸವಣೂರು, ಇಜಾಝ್ ಪರ್ಲಡ್ಕ, ಆರಿಫ್ ಸಾಲ್ಮರ, ಅಭಿಷೇಕ್ ಬೆಳ್ಳಿಪ್ಪಾಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ತುರ್ತು ರಕ್ತದ ಬೇಡಿಕೆಯ ಮನವಿಗೆ ಸ್ಪಂದಿಸಿ ಹಲವಾರು ಬಾರಿ ಸ್ವಯಂ ರಕ್ತದಾನಿಯಾಗಿ ಹಾಗೂ ಇತರರನ್ನು ರಕ್ತದಾನ ಮಾಡಲು ಪ್ರೇರೇಪಿಸಿ ರಕ್ತದಾನ ಮಾಡಿಸುತ್ತಿರುವ ಹತ್ತಕ್ಕೂ ಅಧಿಕ ಮಂದಿಯ ಸೇವೆಯನ್ನು ಗುರುತಿಸಿ ಕಿರು ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯನಿರ್ವಾಹಕರಾದ ಇಫಾಝ್ ಬನ್ನೂರು, ಅಲಿ ಪರ್ಲಡ್ಕ, ಸಾಬಿತ್ ಕುಂಬ್ರ, ರಫೀಕ್ ಕೆಮ್ಮಾಯಿ, ರಝ್ವೀನ್ ಗುರುವಾಯನಕೆರೆ, ನೌಶಾದ್ ಮಂಚಿ, ಜುನೈದ್ ಬಂಟ್ವಾಳ, ನಾಸಿರ್ ನಾಚಿ, ಲಾರೆನ್ಸ್ ಬೆಳ್ತಂಗಡಿ, ರಿಯಾಝ್ ಕಣ್ಣೂರು, ಮುಸ್ತಫ ಬೋಳಂತೂರು, ಸಿರಾಜ್ ಜೈ ಭಾರತ್ ಉಪಸ್ಥಿತರಿದ್ದರು.
ರೋಗಿಗಳಿಗೆ ರಕ್ತದ ಬೇಡಿಕೆಯ ಕರೆ ಬಂದಾಗ ತಕ್ಷಣ ಸ್ಪಂದಿಸುವ,ರಕ್ತದಾನ ಶಿಬಿರಗಳನ್ನು ನಡೆಸಲು ಪ್ರೇರೆಪಿಸಿ ಜೀವಧಾನಿಗಳಾಗುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿರುವ ರೋಟರಿ ಕ್ಯಾಂಪ್ಕೊ ರಕ್ತ ನಿಧಿ ಸಿಬ್ಬಂಧಿಗಳಾದ ಸಜನಿ ಮಾರ್ಟಿಸ್, ಕುಲದೀಪ್, ಸವಿತಾ, ಶೃತಿ ಬಿ.ಎನ್, ನಮ್ರತಾ, ಅನಿತಾ ರವರನ್ನು ಅಭಿನಂದಿಸಿ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಒಟ್ಟು 56 ಮಂದಿ ದಾನಿಗಳು ಸ್ವಯಂಪ್ರೇರಿತವಾಗಿ ಆಗಮಿಸಿ ರಕ್ತದಾನ ಮಾಡಿದರು. ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವರಿಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ವತಿಯಿಂದ ಧನ್ಯವಾದ ಸಲ್ಲಿಸಲಾಯಿತು. ಅಝೀಝ್ ಕೆಮ್ಮಾಯಿ ಸ್ವಾಗತಿಸಿ, ವಂದಿಸಿದರು. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು