ಕನ್ಯೆ ಹುಡುಕಿ ಹುಡುಕಿ ಸುಸ್ತಾದ ಯುವಕನೊಬ್ಬ ಗ್ರಾಮ ಪಂಚಾಯತಿ ಮೊರೆಹೋಗಿದ್ದಾನೆ! ಗ್ರಾಮ ಪಂಚಾಯತಿ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾನೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿಯಲ್ಲಿ ಈ ಪ್ರಸಂಗ ನಡೆದಿದೆ. ತನಗೊಂದು ಕನ್ಯೆಯನ್ನು ಹುಡುಕಿಕೊಡಿ ಎಂದು ಗ್ರಾಮ ಪಂಚಾಯತ್ ಪಿಡಿಒಗೆ ಮುತ್ತು ಹೂಗಾರ (28) ಎಂಬ ಯುವಕ ಮನವಿ ಮಾಡಿದ್ದಾನೆ.
ಗ್ರಾಮ ಪಂಚಾಯತಿಗೆ ಅಭಿವೃದ್ಧಿ ಕೆಲಸ ಮಾಡಿಕೊಡಿ, ಕಳಪೆ ಕಾಮಗಾರಿ ಆಗಿವೆ ದುರಸ್ತಿ ಮಾಡಿ. ಕುಡಿಯುವ ನೀರಿನ ಸಮಸ್ಯೆ ಇದೆ, ಮೂಲಭೂತ ಸೌಕರ್ಯ ಕೊಡಿ ಎಂದು ಮನವಿ ಕೊಡುವುದು ಸಹಜ. ಆದ್ರೆ ಈ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಮುತ್ತು ಹೂಗಾರ ತನ್ನ ಜೀವನಕ್ಕೆ ಸಂಗಾತಿ ಹುಡುಕಿ ಕೊಡಿ ಎಂದು ವಿನೂತನ ಪ್ರಯತ್ನ ಮಾಡಿದ್ದಾನೆ.
ಏನಿದು ಪ್ರಸಂಗ?
28 ವರ್ಷದ ಮುತ್ತು ಹೂಗಾರ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 50 ಸಾವಿರ ರೂಪಾಯಿ ಆದಾಯವಿದೆ. ಆದರೂ ಹುಡುಗಿ ಸಿಗ್ತಾಯಿಲ್ಲ ಎಂಬುದು ಆತನ ಅಳಲಾಗಿದೆ. ನನಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇಲ್ಲ. ಕನ್ಯೆ ತೋರಿಸ್ತಾರೆ, ಬಳಿಕ ಸರ್ಕಾರಿ ನೌಕರಿ ಇದ್ದವ್ರಿಗೆ ಕೊಡ್ತೀವಿ ಅಂತಾ ಸಬೂಬು ಹೇಳ್ತಾ ಇದಾರೆ ಅಂತಾ ಯುವಕ ತನ್ನ ಗೋಳಾಟ ತೋಡಿಕೊಂಡಿದ್ದಾನೆ.
ಸುತ್ತಮುತ್ತ ಹಳ್ಳಿ ಹಳ್ಳಿ ಅಡ್ಯಾಡಿ ಕನ್ಯೆ ನೋಡಿದ್ದೇನೆ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ. ಹೀಗಾಗಿ ತನಗೊಂದು ಜೀವನದ ಸಂಗಾತಿಯನ್ನ ಹುಡುಕುವಂತೆ ಗ್ರಾಮ ಪಂಚಾಯತ್ಗೆ ಆತ ಮನವಿ ಸಲ್ಲಿಸಿದ್ದಾನೆ. ಯಾವುದೇ ಜಾತಿಯ ಕನ್ಯೆ ಇದ್ದರೂ ಪರವಾಗಿಲ್ಲ ಎಂದು ಗ್ರಾಮ ಪಂಚಾಯತ್ಗೆ ಮನವಿ ಕೊಟ್ಟಿದ್ದಾರೆ ಮುತ್ತು ಹೂಗಾರ.