ಪುತ್ತೂರು: ಬಂಟ್ವಾಳ ತಾಲೂಕು ವ್ಯಾಪ್ತಿಗೊಳಪಟ್ಟ ಅಳಕೆಮಜಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷನಿಕ ಗತವರ್ಷದಲ್ಲಿ ೬ ನೇ ತರಗತಿ ಪ್ರಾರಂಭ ಮಾಡುವಂತೆ ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಜೂ. ೨೨ ರಂದು ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.
ಅಳಕೆಮಜಲು ಕಿರಿಯ ಪ್ರಾಥಮಿಕ ಶಾಲೆಯು ೧ ನೇ ತರಗತಿಯಿಂದ ೫ ನೇ ತರಗತಿಯವರೆಗೆ ನಡೆಯುತ್ತಿದ್ದು, ಒಟ್ಟು ೧೩೩ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ೬ ನೇ ತರಗತಿಯ ವಿದ್ಯಾಭ್ಯಾಸಕ್ಕಾಗಿ ಸುಮಾರು ೩ ಕಿ.ಮೀ ದೂರವಿರುವ ಮಿತ್ತೂರು, ಕಬಕ, ಓಜಾಲ ಶಾಲೆಗಳಿಗೆ ಹೋಗಬೇಕಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಎಸ್.ಡಿ.ಎಂ.ಸಿ ಸಭೆಯಲ್ಲಿ ಚರ್ಚಿಸಿ ೨೦೨೩-೨೪ ನೇ ಸಾಲಿನಲ್ಲಿ ೬ ನೇ ತರಗತಿಗೆ ಉನ್ನತೀಕರಿಸಲು ನಿರ್ಣಯ ಕೈಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ.
ಅದರಂತೆ ಮಾನ್ಯ ಉಪ ನಿರ್ದೇಶಕರು, ಮಂಗಳೂರು ಇವರು ಸದರಿ ಶಾಲೆಯನ್ನು ೬ ನೇ ತರಗತಿಗೆ ಉನ್ನತೀಕರಿಸಬಹುದೆಂದು ತಮ್ಮ ಅಭಿಪ್ರಾಯದೊಂದಿಗೆ ಅನುಮತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗತ ವರ್ಷದಿಂದಲೇ ೬ ನೇ ತರಗತಿ ಆರಂಭ ಮಾಡುವಂತೆ ಇಲಾಖೆಗೆ ಆದೇಶ ನೀಡುವಂತೆ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.