ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಸುತ್ತಿರುವ ಬಾರೀ ಮಳೆಗೆ ಇಬ್ಬರು ಮೃತಪಟ್ಟ ಘಟನೆ ದ.ಕ ಜಿಲ್ಲೆಯಲ್ಲಿ ಇಂದು ವರದಿಯಾಗಿದೆ.
ಸೋಮೇಶ್ವರ ವ್ಯಾಪ್ತಿಯ ಪಿಲಾರಿನಲ್ಲಿ ಮನೆ ಸಂಪರ್ಕಿಸುವ ಸೇತುವೆ ದಾಟುವ ವೇಳೆ ಕಾಲು ಜಾರಿ ಬಿದ್ದು ಓರ್ವ ಸಾವನ್ನಪ್ಪಿದ್ದಾರೆ. ನಿನ್ನೆ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ನಿವಾಸಿ ಸುರೇಶ್ ಗಟ್ಟಿ (52) ಎಂಬವರು ನೀರಿಗೆ ಬಿದ್ದು ಮೃತಪಟ್ಟವರು. ಸುರೇಶ್ ಗಟ್ಟಿಯವರು ಸಂಜೆ , ಕೆಲಸ ಮುಗಿಸಿ ಮನೆಗೆ ಹೋಗಲು ಸೇತುವೆ ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದಾರೆ ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ತಡರಾತ್ರಿ ಸಮುದ್ರ ತೀರದಲ್ಲಿ ಭಾರಿ ಸುಂಟರಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದು, ಈ ಬಗ್ಗೆ ಅರಿವಿಲ್ಲದೇ ಮುಂಜಾನೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ಎಂಬವರು ಆಕಸ್ಮಿಕವಾಗಿ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ದ.ಕ ಜಿಲ್ಲೆಯಲ್ಲಿ ಮಳೆ ಇನ್ನಷ್ಟು ಜೋರಾಗಿಯೇ ಬೀಳುತ್ತಿದ್ದು ಹವಾಮಾನ ಇಲಾಖೆ ದ.ಕ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.