ದಾವಣಗೆರೆ: ರಾಜ್ಯದಲ್ಲಿ ಭಾರಿ ಮಳೆ ಸುರಿಯುತಿದ್ದು, ನಿರಂತರ ಮಳೆ ಸುರಿಯುತ್ತಿದ್ದರಿಂದ ಮನೆಗೋಡೆ ಕುಸಿದು ಬಿದ್ದು, ಒಂದು ವರ್ಷದ ಮಗು ಹಾಗೂ 3 ವರ್ಷದ ಬಾಲಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಾವಣಗೆರೆ ಹಾಗೂ ಹಾವೇರಿಯಲ್ಲಿ ನಡೆದಿದೆ.
ಮಳೆಗೆ ಮನೆಯ ಗೋಡೆ ಕುಸಿತಗೊಂಡು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರಿನಲ್ಲಿ ಲಕ್ಷ್ಮಿ ಹಾಗೂ ಕೆಂಚಪ್ಪ ದಂಪತಿಯ ಪುತ್ರಿ ಸ್ಪೂರ್ತಿ (1) ಅದರಡಿ ಸಿಲುಕಿ ಮೃತಪಟ್ಟಿದೆ.
ಘಟನೆಯಲ್ಲಿ ಬಾಲಕಿಯ ತಂದೆ-ತಾಯಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಪೂರ್ತಿ ಮಗುವಿನ ಪೋಷಕರ ಆಕ್ರಂದನ ಮುಗಿಲೇರಿದೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅದೇ ರೀತಿ ಹಾವೇರಿ ಜಿಲ್ಲೆಯಲ್ಲೂ ನಿರಂತರ ಮಳೆ ಸುರಿಯುತಿದ್ದು, ಇಲ್ಲಿನ ಮಾಳಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಭಾಗ್ಯ ಚಳಮರದ (3) ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಮನೆಯಲ್ಲಿದ್ದ ಮತ್ತೊಂದು ಮಗುವಿಗೂ ಗಾಯವಾಗಿದೆ.
2 ದಿನಗಳ ಹಿಂದೆ ನಿರಂತರ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಬಾಲಕಿ ಭಾಗ್ಯ ಗಂಭೀರವಾಗಿ ಗಾಯಗೊಂಡಿದ್ದಳು. ಬಳಿಕ ಆಕೆಯನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ.

ಇದೀಗ ಬಾಲಕಿ ಭಾಗ್ಯ ಚಳಮರದ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.