ಸುಬ್ರಹ್ಮಣ್ಯ: ಕಳೆದ ಎರಡು ದಿನಗಳಿಂದ ಭಾರಿ ಮಳೆ ಗಾಳಿ ಭೀಸುತ್ತಿದ್ದು ಕೆಲವು ಕಡೆ ರಸ್ತೆಗೆ ಗುಡ್ಡೆ ಮರ ಜರಿದು ಬೀಳುತ್ತಿದ್ದು ಹಲವು ಕಡೆ ಪರಿಸ್ಥಿತಿ ಹದಗೆಟ್ಟಿದೆ.ಇಂದು ಮಳೆಯ ಅವಾಂತರದ ಬಗ್ಗೆ ವರದಿ ಮಾಡಲು ತೆರಳಿದ್ದ ಟಿವಿ ಮಾದ್ಯಮದವರೂ ಕಮಿಲ ಗ್ರಾಮದ ಸಂಕಷ್ಟವನ್ನು ಸ್ವತಃ ಅನುಭವಿಸಿದ್ದು ಮಾತ್ರವಲ್ಲದೆ, ರಸ್ತೆಗೆ ಬಿದ್ದ ಮರ ತೆರವು ಮಾಡಿ ಜವಾಬ್ದಾರಿ ಮೆರೆದ ಘಟನೆ ನಡೆದಿದೆ.
ನಿನ್ನೆ ಬಿಟಿವಿ,ಟಿವಿ9,ಸುವರ್ಣ ನ್ಯೂಸ್, ವಿಸ್ತಾರ ನ್ಯೂಸ್ ವರದಿಗಾರರು ಸುಬ್ರಹ್ಮಣ್ಯದ ಪರ್ವತಮುಖಿ ಎಂಬಲ್ಲಿಗೆ ತೆರಳಿದ್ದರು. ಅಲ್ಲಿಗೆ ತಲುಪಲು ಏನೆಕಲ್ಲಿನ ಸೇತುವೆ ಮೇಲೆ ಹರಿಯುತ್ತಿದ್ದ ನೆರೆ ನೀರು ದಾಟಿ 2 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಅಲ್ಲಿನ ಜನರ ಸಮಸ್ಯೆ ಅಲಿಸಿದ್ದಾರೆ . ಅಷ್ಟೇ ಅಲ್ಲದೆ ಸುಬ್ರಹ್ಮಣ್ಯದಲ್ಲಿ ಸಿಲುಕಿರುವ ಪರ್ವತಮುಖಿ ಗ್ರಾಮದ ಜನರ ಸಮಸ್ಯೆ ಆಲಿಸಲು ಬಳ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೂ ತೆರಳಿದ್ದಾರೆ. ಈ ವೇಳೆ ಬಳ್ಳ ಗುತ್ತಿಗಾರು ನಡುವೆ ಕಮಿಲ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು ವಾಹನ ಸಂಚಾರ ಅಲ್ಲೂ ಸ್ಥಗಿತವಾಗಿತ್ತು. ಈ ವೇಳೆ ಸಮೀಪದ ಮನೆಯೊಂದರಿಂದ ಮರ ಕತ್ತರಿಸಲು ಕತ್ತಿ ತಂದು ಮಾದ್ಯಮದ ಸ್ನೇಹಿತರಾದ ಬಿಟಿವಿಯ ಶರತ್ ಸುವರ್ಣ ಟಿವಿಯ ಭರತ್, ಟಿವಿ9 ನ ಪೃಥ್ವಿರಾಜ್ ಹಾಗೂ ರಾಜೇಶ್ ಕೆ ಪೂಜಾರಿ, ವಿಸ್ತಾರ ಟಿವಿಯ ರಾಜೇಶ್ ಹಾಗೂ ಲಕ್ಷ್ಮಣ್, ಸೇರಿ ಮರ ಕಡಿದು ರಸ್ತೆ ತೆರವುಗೊಳಿಸಿದ್ದಾರೆ. ಸುಮಾರು ಅರ್ಧ ಘಂಟೆಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತುಂಡರಿಸಿ ವಾಹನ ಸವಾರರು ನೆಮ್ಮದಿಯಲ್ಲಿ ಪ್ರಯಾಣಿಸುವಂತೆ ಮಾಡಿದ್ದಾರೆ. ಅರ್ಧ ಘಂಟೆಯಲ್ಲಿ ಸಾಕಷ್ಟು ವಾಹನಗಳು ರಸ್ತೆಯ ಉದ್ದಕ್ಕೂ ಸಾಲುಗಟ್ಟಿ ನಿಂತಿದ್ದು ಮರ ತೆರವಾದ ಬಳಿಕ ಸುಬ್ರಹ್ಮಣ್ಯ ಕಡೆಗೆ ತೆರಳಿದೆ. ಮಾದ್ಯಮದವರು ರಸ್ತೆ ತೆರವು ಮಾಡಿದ ಬಗ್ಗೆ ಪ್ರಯಾಣಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುದ್ದಿ ವಿಚಾರ ಮಾತ್ರವಲ್ಲದೆ ತುರ್ತು ಸಂದರ್ಭದಲ್ಲೂ ಮಾದ್ಯಮದವರು ಮುಂದೆ ಬರುತ್ತಾರೆ ಅನ್ನೋದಕ್ಕೆ ಪುತ್ತೂರು ಮತ್ತು ಮಂಗಳೂರು ಮಾಧ್ಯಮ ಮಿತ್ರರ ಈ ಕಾರ್ಯ ಸಾಕ್ಷಿಯಾಗಿದೆ.