ಕಲಬುರಗಿ: ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷ ಕೊಟ್ಟಂತಹ ಗ್ಯಾರಂಟಿ ನಂಬಿ ಆಶೀರ್ವಾದ ಮಾಡಿದ್ದಾರೆ. ಈಗ ಅಧಿಕಾರಕ್ಕೆ ಬಂದ ಮೇಲೆ ಆ ಐದು ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಾವಿರಾರು ಕಾರ್ಯಕರ್ತರ ಮುಂದೆ ವೇದಿಕೆಯಲ್ಲಿ ಹೇಳಿದರು.

ಕಳೆದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 160 ಭರವಸೆಗಳಲ್ಲಿ 145 ಭರವಸೆಗಳನ್ನ ಈಡೇರಿಸಿದ್ದೇವೆ. ಈ ಬಾರಿಯೂ ಮುಂದಿನ 5 ವರ್ಷದಲ್ಲಿ ನಮ್ಮ ಪ್ರಣಾಳಿಕೆಯ ಎಲ್ಲಾ ಅಂಶ ಜಾರಿಗೆ ತರುತ್ತೆವೆ ಎಂದು ಭರವಸೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ, ಇವತ್ತಿನ ದಿನ ಐತಿಹಾಸಿಕ ದಿನ. ಜ್ಯೋತಿ ಬೆಳಗಿಸುವ ಮೂಲಕ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಚಾಲನೆ ನೀಡಿದ್ದೇವೆ. ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನ ಘೋಷಿಸಿ ರಾಜ್ಯದ ಜನರಿಗೆ ವಾಗ್ದಾನ ಮಾಡಿದ್ದೆವು. ನಾನು, ಡಿಕೆಶಿ ಗ್ಯಾರಂಟಿ ಕಾರ್ಡ್ಗೆ ಸಹಿ ಮಾಡಿ ಹಂಚಿದ್ದೆವು. ಜನ ಗ್ಯಾರಂಟಿ ನಂಬಿ ಆಶೀರ್ವಾದ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ ಎಂದು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
