ಸುಳ್ಯ: ಕಳೆದ ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯಳ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿ.ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ವಾಹನ ಜಾಥಾ ಸಾಗುವ ಮೂಲಕ ಪ್ರತಿಭಟನೆ ನಡೆಯಿತು.
ಈ ಒಂದು ವಾಹನ ಜಾಥಾ ನಿಂತಿಕಲ್ಲಿನಿಂದ ಸುಳ್ಯದವರೆಗೆ ಸುಮಾರು 22 ಕಿ.ಮೀವರೆಗೆ ಸಾಗಿ ಬಂದು ನಂತರ ಕಾಲ್ನಡಿಗೆಯೊಂದಿಗೆ ಸಾಗಿ ಸುಳ್ಯದಲ್ಲಿ ಬೃಹತ್ ಸಭೆ ನಡೆಯಿತು.
ನಂತರ ವೇದಿಕೆಯಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಆ ದೀಪವನ್ನು ಹೋರಾಟಗಾರ ತಿಮರೋಡಿಗೆ ಹಸ್ತಾಂತರಿಸಿದರು.ನಂತರ ವೇದಿಕೆಯಲ್ಲಿ ಮಾತನಾಡಿದ ಕುಸುಮವಾತಿ ಕಣ್ಣೀರಿನೊಂದಿಗೆ ನನ್ನ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗದಿರಲಿ ಎಂದು ಕಣ್ಣೀರಾದರು.
ನಂತರ ಮಾತನಾಡಿದ ತೀಮರೋಡಿಯವರು ಪಕ್ಷ,ಜಾತಿ,ಪಂಗಡ,ಸಂಘಟನೆ, ಮರೆತು ಇದ್ಯಾವುದೂ ಇಲ್ಲದೆ ಎಲ್ಲರೂ ಸಹೋದರರಂತೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸೋಣ. ನ್ಯಾಯ ಸಿಗಲು ಇನ್ನೂ ಹನ್ನೊಂದು ವರ್ಷವಾದರೂ ಹೋರಾಟ ಬಿಡುವುದಿಲ್ಲ ಎಂದು ಗರ್ಜಿಸಿದರು.
ಬೃಹತ್ ಜಾಥಾದಲ್ಲಿ ಪಕ್ಷ, ಜಾತಿ, ಧರ್ಮ ಮರೆತು ಹೋರಾಟ ನಡೆಸಲಾಗುತ್ತಿದೆ. ಸುಳ್ಯ ಗೌಡರ ಸಂಘ ಸೇರಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದಾರೆ ಎಂದು ಸಂಘಟಕರು ಈ ಸಂದರ್ಭದಲ್ಲಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು.