ಸವಣೂರು: ಇಲ್ಲಿನ ಚಾಪಲ್ಲ ಬದ್ರಿಯಾ ಜುಮ್ಮಾ ಮಸೀದಿಯ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವವನ್ನು ಹಿದಾಯತುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಅಸಯ್ಯಿದ್ ಹಾಮಿದುಲ್ ಹಾದೀ ತಂಙಳ್ ಮಂಜೇಶ್ವರ ದುವಾ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಚಾಪಲ್ಲ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಉಮರ್ ಹಾಜಿ ಕೆನರಾ ಧ್ವಜಾರೋಹಣಗೈದರು .
ಹಿದಾಯತುಲ್ ಇಸ್ಲಾಂ ಮದ್ರಸದ ವಿಧ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಬಳಿಕ ಸಂದೇಶದ ಭಾಷಣ ಮಾಡಿದ ಚಾಪಲ್ಲ ಮುದರ್ರಿಸರಾದ ಉಸ್ತಾದ್ ಅಶ್ರಫ್ ಫಾಝಿಲ್ ಬಾಖವಿ “ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸಲ್ಮಾನರ ಕೊಡುಗೆ ಅಪಾರ. ಮಸೀದಿ, ಮದರಸ ಮತ್ತು ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಮಹತ್ವಪೂರ್ಣವಾಗಿ ಆಚರಿಸಲಾಗುತ್ತಿದೆ. ಭಾರತದ ಸ್ವಾತಂತ್ರ್ಯವೆಂಬುವುದು ಕೇವಲ ಒಂದಿಬ್ಬರ ಹೋರಾಟದ ಫಲವಲ್ಲ. ನಮ್ಮ ಪೂರ್ವಿಕರು ಮಾಡಿದ ತ್ಯಾಗ ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ಲಭಿಸಿದೆ. ಇಂಡಿಯಾ ಗೇಟ್ ಗೋಡೆಯಲ್ಲಿ ದಾಖಲಾಗಿರುವ ಸ್ವಾತಂತ್ರ್ಯ ಹೋರಾಟಗಾರರ ನಾಮಗಳಲ್ಲಿ ಸಿಂಹಪಾಲು ಮುಸ್ಲಿಮರದ್ದಾಗಿದೆ ಎಂಬುದು ಭಾರತದ ಸ್ವಾತಂತ್ರ್ಯ ಚಳುವಳಿಗೆ ಮುಸ್ಲಿಮರು ನೀಡಿದ ಕೊಡುಗೆಯನ್ನು ಎತ್ತಿ ಹಿಡಿಯುತ್ತದೆ ” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಎಂ ಎ, ಮಖಾಷಿಫುಲ್ ಖುಲೂಬ್ ದರ್ಸ್ ಪ್ರಧಾನ ಕಾರ್ಯದರ್ಶಿ ಹನೀಫ್ ಸವಣೂರು ಸಂದರ್ಭೋಚಿತವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ತೋಟದಮೂಲೆ ಹಾಗೂ ಪದಾಧಿಕಾರಿಗಳು, ಮದ್ರಸ ಅದ್ಯಾಪಕರು, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಷನ್ ಪದಾಧಿಕಾರಿಗಳು, ಎಸ್ಕೆಎಸ್ಎಸ್ಎಫ್ ಪದಾಧಿಕಾರಿಗಳು, ರಿಫಾಯಿಯ್ಯಾ ಧಫ್ ಸಂಘದ ಪದಾಧಿಕಾರಿಗಳು, ಮಖಾಶಿಫುಲ್ ಖುಲೂಬ್ ದರ್ಸ್ ವಿಧ್ಯಾರ್ಥಿಗಳು, ಹಿದಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿದಾಯತುಲ್ ಇಸ್ಲಾಂ ಮದ್ರಸದ ಮುಖ್ಯೋಪಾಧ್ಯಾಯರಾದ ತಾಜುದ್ದೀನ್ ಫೈಝಿ ಸ್ವಾಗತಿಸಿ, ಅಧ್ಯಾಪಕ ಅಬೂಬಕ್ಕರ್ ಸಿದ್ದೀಕ್ ಅರ್ಶದಿ ವಂದಿಸಿದರು.