ಪುತ್ತೂರು: ಶಾಲೆಗೆ ಮಕ್ಕಳನ್ನು ಕಳುಹಿಸಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ ಮಕ್ಕಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪೋಷಕರಿಗೂ ಇದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಸರಕಾರಿ ಹಿ ಪ್ರಾ ಶಾಲೆಯಲ್ಲಿ ನಡೆದ ವಿವೇಕ ಕೊಠಡಿ ಉದ್ಘಾಟಿಸಿ ಮತನಾಡಿದರು.

ನಾವು ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತೇವೆ, ಸಹಿಸಿಕೊಳ್ಳುತ್ತೇವೆ ಆದರೆ ಅವರ ವಿದ್ಯಾಬ್ಯಾಸದ ಕಡೆ ಗಮನಕೊಡುವುದರಲ್ಲಿ ಸವಲ್ಪ ಹಿಂದೆ ಇದ್ದೇವೆ. ಶಾಲೆಗೆ ಹೋದ ಮಗು ಕಲಿಯುತ್ತಿದೆಯೇ ಎಂಬುದನ್ನು ನಾವು ತಿಳಿದುಕೊಳ್ಳಬೇಕು, ಶಾಲೆಗೆ ಭೇಟಿ ಮಾಡಿ ಮಕ್ಕಳ ಬಗ್ಗೆ ಶಿಕ್ಷಕರ ಮೂಲಕ ಅರಿತುಕೊಳ್ಳುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಹೇಳಿದರು.
ಯಾವುದೇ ಒಂದು ಮಗು ಶಿಕ್ಷಣದಿಂದ ವಂಚತರಾಗಬಾರದು ಎಂಬ ಉದ್ದೆಶದಿಂದ ಸರಕಾರ ಕಾನೂನುಗಳನ್ನು ರೂಪಿಸಿ ಮಗು ಶಾಲೆ ಸೇರಿಕೊಳ್ಳುವಂತೆ ಮಾಡುತ್ತಿದೆ, ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಬ್ಯಗಳೂ ಇದೆ, ಶಿಕ್ಷಣದ ಕಡೆ ನಾವು ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಹೇಳಿದರು. ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ, ಮುಂದಿನ ವರ್ಷದಿಂದ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ತರಗತಿಯನ್ನು ಪ್ರಾರಂಭ ಮಾಡುವಲ್ಲಿ ಕ್ರಮವಹಿಸಲಾಗುವುದು ಎಂದು ಹೇಳಿದರು.


ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ನಾವು ಶಿಸ್ತನ್ನು ಕಲಿಸಬೇಕು, ಶಾಲೆಯಲ್ಲಿ ಹೆಚ್ಚು ಸಮಯ ಮಕ್ಕಳಿರುವ ಕಾರಣ ಶಿಸ್ತನ್ನು ಶಾಲೆಯಿಂದಲೇ ಹೆಚ್ಚು ಕಲಿಯುವುದರಿಂದ ಶಿಕ್ಷಕರು ಈ ವಿಚಾರದಲ್ಲಿ ಹೆಚ್ಚು ಮುತುವರ್ಜಿವಹಿಸಬೇಕು. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಇಲ್ಲದಂತೆ ಸರಕಾರ ನೋಡಿಕೊಳ್ಳುತ್ತದೆ, ಪೋಷಕರು ಶಾಲೆಗೆ ಭೇಟಿ ಕೊಡುವ ಮೂಲಕ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಮತ್ತು ಉಪಾಧ್ಯಕ್ಷರಾದ ರಾಮ ರವರು ಮಾತನಾಡಿ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು.ಶಾಲೆಯ ನೂತನ ಶೌಚಾಲಯವನ್ನು ಗ್ರಾಪಂ ಅಧ್ಯಕ್ಷೆ ಫೌಝಿಯಾ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ರೈ , ಗ್ರಾಪಂ ಅಧ್ಯಕ್ಷೆ ಫೌಜಿಯಾ, ಉಪಾಧ್ಯಕ್ಷ ರಾಮ ರವರನ್ನು ಸನ್ಮಾನಿಸಲಾಯಿತು.
ತಂದೆ ತಾಯಿಯನ್ನು ದೂರ ಮಾಡಬೇಡಿ
ನೀವು ಕಲಿತು ದೊಡ್ಡ ವ್ಯಕ್ತಿಗಳಾದ ಬಳಿಕ ತಂದೆ ತಾಯಿಯನ್ನು ದೂರಮಾಡಬೇಡಿ, ಅವರು ಊಟ ಮಾಡದೇ ಇದ್ದರೂ ನಿಮ್ಮನ್ನು ಹಸಿವಿನಿಂದ ಇರದಂತೆ ನೋಡಿಕೊಂಡು ಕಷ್ಟ ಪಟ್ಟು ಕಲಿಸಿರುತ್ತಾರೆ. ಕಲಿತು ದೊಡ್ಡವರಾದ ಬಳಿಕ ಅಥವಾ ಉನ್ನತ ಸ್ಥಾನ ದೊರಕಿದಾಗ ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವುದು ಅಥವಾ ಅವರನ್ನು ಮನೆಯಿಂದ ಹೊರಗೆ ಇಡುವ ಕೆಲಸವನ್ನು ಯಾರೂ ಮಾಡಬಾರದು, ತಂದೆ ತಾಯಿಯನ್ನು ದೇವರ ಸಮಾನವಾಗಿ ನಾವು ಕಾಣಬೇಕು, ಅವರ ಮಾರ್ಗದರ್ಶನದಲ್ಲೇ ನಾವು ಬದುಕಬೇಕು, ತಂದೆ ತಾಯಿಯನ್ನು ಆರೈಕೆ ಮಾಡದ ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ನಾವು ಶೂನ್ಯರು
ಅಶೋಕ್ ರೈ ಶಾಸಕರು ಪುತ್ತೂರು
ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆನಸಿನಕಾನ, ಗ್ರಾಪಂ ನಿಕಟ ಪೂರ್ವ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಸದಸ್ಯರಾದ ಶ್ರೀರಾಂ ಪಕ್ಕಳ, ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಎಸ್‌ಡಿಎಂಸಿ ಉಪಾಧ್ಯಕ್ಷೆ ಮನೋರಮಾ, ಡಿಸಿಸಿ ಸದಸ್ಯೆ ಅಸ್ಮಾ ಗಟ್ಟಮನೆ, ಎಸ್‌ಡಿಎಂಸಿ ಸದಸ್ಯರುಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.