ಬೆಂಗಳೂರು: ಎಲ್ಲರಿಗೂ ಒಂದೇ ಕಾನೂನು, ಸರ್ವ ಧರ್ಮ ಸಮನ್ವತೆ ಜೊತೆಗೆ ಸಮಾನತೆಯ ದ್ಯೇಯ ಸಂವಿಧಾನದ ಮೂಲ ದ್ಯೇಯ ಏಕೆಂದರೆ ಸಂವಿಧಾನ ಪ್ರಜೆಗಳ ಶಕ್ತಿ.
ವಿಶ್ವದಾದ್ಯಂತ ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಮೂಲಕ ಇದನ್ನು 2007 ರಲ್ಲಿ ಸ್ಥಾಪಿಸಲಾಯಿತು. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದು ಮತ್ತು ಪ್ರಜಾಪ್ರಭುತ್ವದ ಉತ್ತೇಜನಕ್ಕೆ ಸರ್ಕಾರಗಳನ್ನು ಪ್ರೇರೇಪಿಸುವುದು ಉದ್ದೇಶವಾಗಿತ್ತು. ಸರ್ವಾಧಿಕಾರದ ಧೋರಣೆಯಿಂದ ವಿಶ್ವದಾದ್ಯಂತ ಪ್ರಜಾಪ್ರಭುತ್ವವು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುತ್ತಾ, ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಗೌರವದ ಬಗ್ಗೆ ಜಾಗೃತಿಯನ್ನ ಮೂಡಿಸಿ ಅವರನ್ನು ಸಬಲೀಕರಣಗೊಳಿಸುವ ಚಿಂತನೆಗಳು ನಡೆಸಬೇಕಿದೆ.
ಆಧುನಿಕ ತಂತ್ರಜ್ಞಾನದ ಮೊರೆ ಹೋದ ಯುವಜನರು ಆನ್‌ಲೈನ್ಗಳ ಮೂಲಕ ಪ್ರಸಾರವಾಗುವ ಸುಳ್ಳು ಮಾಹಿತಿಗಳನ್ನು ಓದಿ, ವಿಚಾರಗಳ ಮೇಲೆ ಕಾಡುವ ಅಸ್ಥಿರತೆಯ ಪರಿಣಾಮಗಳಿಂದ ಉಂಟಾಗುತ್ತದೆ. ಬಿಕ್ಕಟ್ಟಿನಿಂದ ಅವರಿಗೆ ರಕ್ಷಣೆ ನೀಡಬೇಕಾಗಿದೆ. ಕಾರಣ ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ನಾಳೆಯ ಪ್ರಜೆಗಳೇ ಮುಂದಿನ ಪ್ರಜಾಪ್ರಭುತ್ವದ ಚುಕ್ಕಾಣಿಯನ್ನ ಹಿಡಿಯಬೇಕಾದದ್ದು. ನಾವಿಕನಿದ್ದರೆ ಮಾತ್ರ ದೋಣಿ ಮುಂದಕ್ಕೆ ಸುಗಮವಾಗಿ ಚಲಿಸಬಲ್ಲವು. ಸ್ಟೇರಿಂಗ್ ಮುಂದೆ ಕುಳಿತುಕೊಂಡ ಮಾತ್ರಕ್ಕೆ ಚಾಲಕನಾಗಲಾರ. ಪಾರದರ್ಶಕವಾದ ಆಡಳಿತ ನೀಡಬಲ್ಲ ಪ್ರಜೆಗಳು ಮುಂದಿನ ಪೀಳಿಗೆಯ ಬಹುದೊಡ್ಡ ಬೇಡಿಕೆಯಾಗಿದೆ.
ಪ್ರಜಾಪ್ರಭುತ್ವದ ಉಳಿವಿಗೆ ಮೊದಲು ಕ್ರಿಯಾಶೀಲವಾದ ಆಡಳಿತ ಸರಕಾರವಾಗಿದೆ. ಸರ್ಕಾರವು ಪ್ರಜಾಪ್ರಭುತ್ವದ ಬಗೆಗಿನ ಜಾಗೃತಿಯನ್ನು ಮೂಡಿಸುವ ಸಾರ್ವಜನಿಕ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಸೆಮಿನಾರಗಳನ್ನು, ಪ್ರಬಂಧ ಮಂಡನೆ ಸೇರಿದಂತೆ ಸೃಜನಾತ್ಮಕವಾದ ಕಾರ್ಯಕ್ರಮಗಳ ಮೂಲಕ ಪ್ರಜಾಪ್ರಭುತ್ವಕ್ಕೆ ಹೆಚ್ಚು ಜೀವ ತುಂಬುವ ಕೆಲಸ ಮಾಡಬೇಕಾಗಿದೆ. ಇದೇ ಕೆಲಸವನ್ನು ಮಾಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರವು 15 ನೇ ಸೆಪ್ಟೆಂಬರ್ 2023, ವಿಧಾನಸೌದದ ಮುಂದೆ ಸರ್ಕಾರ ಮತ್ತು ನೊಂದಾಯಿತ ಸಾರ್ವಜನಿಕರಿಂದ ಸಂವಿಧಾನದ ಪೀಠಿಕೆಯನ್ನು ಓದು ಕಾರ್ಯಕ್ರಮವನ್ನು ಆಯೋಜಿಸಿದೆ.
ಪ್ರಶಂಸನೀಯ ಈ ನಡೆ ಸಂವಿಧಾನದ ಆಶಯಗಳ ಬಗ್ಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಶೇಷವಾದ ಪಾತ್ರವಹಿಸಲಿದೆ. ಓದಿ ಅಥವಾ ಕೇಳಿ ಹೋಗುವುದಲ್ಲ ಪ್ರಜಾಪ್ರಭುತ್ವದ ದಿನದಂದು ಪ್ರತಿಯೊಬ್ಬ ಪ್ರಜೆಯೂ ಸಂವಿಧಾನಬದ್ಧವಾದ ಜೀವನವನ್ನು ನಡೆಸುತ್ತೇನೆ, ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ, ಸಮಾಜಘಾತಕ ಕೃತ್ಯಗಳಿಗೆ ಪ್ರೇರಣೆ ನೀಡದೆ ನಡೆ ನುಡಿಗಳಲ್ಲಿಯೂ ಸಂವಿಧಾನದ ಆಶಯಗಳನ್ನು ಪಾಲಿಸುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕಾಗಿದೆ.
ಭಾರತದ ಸಂವಿಧಾನದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂಬ ಮೂರು ಮುಖ್ಯವಾದ ಚೌಕಟ್ಟಿನಲ್ಲಿ ರಚಿಸಲಾಗಿದೆ. ದೇಶದ ಪ್ರತಿ ಪ್ರಜೆಗೂ ಸಮಾನವಾದ ಹಕ್ಕು ಮತ್ತು ವಿಧಿ ವಿಧಾನಗಳನ್ನು ಸಂವಿಧಾನ ಅನುಸರಿಸಿದೆ, ಇದು ಸಂವಿಧಾನದ ಜವಾಬ್ದಾರಿಯು ಹೌದು. ದೇಶದ ಎಲ್ಲ ಕಾನೂನುಗಳಿಗಿಂತಲೂ ಮಿಗಿಲಾದುದು ಸಂವಿಧಾನ. ಆಡಳಿತ ನಡೆಸುವ ಸರ್ಕಾರವೂ ಕೂಡ ಸಂವಿಧಾನಕ್ಕೆ ಅನುಸಾರವಾಗಿ ಆಡಳಿತ ನಡೆಸಬೇಕು. ಸಂವಿಧಾನ ಬಾಹಿರವಾದ ಚಟುವಟಿಕೆಗಳಲ್ಲಿ ಸರಕಾರವು ತೊಡಗಿಸಿ ಕೊಂಡರೆ ಪ್ರಶ್ನಿಸುವ ಸಂಪೂರ್ಣವಾದ ಸ್ವಾತಂತ್ರ್ಯವನ್ನು ಸಂವಿಧಾನವು ಹೊಂದಿರುತ್ತದೆ. ನಿರಂಕುಶಾಧಿಕಾರ ಅಥವಾ ಸರ್ವಾಧಿಕಾರಕ್ಕೆ ಸಂವಿಧಾನದಲ್ಲಿ ಎಡೆ ಇಲ್ಲ.
ಧರ್ಮ ನಿರಪೇಕ್ಷಿತವಾಗಿ ರೂಪುಗೊಂಡ ರಾಷ್ಟ್ರಗಳಲ್ಲಿ ಒಂದು ಧರ್ಮ ಬದ್ಧ ಆಡಳಿತವನ್ನು ನಡೆಸುವುದಾಗಲಿ ಇತರ ಧರ್ಮಗಳನ್ನ ಕಡೆಗಣಿಸುವುದು, ಧರ್ಮ ವಿಶ್ವಾಸಿಗಳು ಮತ್ತು ಅವರ ಆಚಾರ ವಿಚಾರಗಳ ಮೇಲೆ ಕಾನೂನುಗಳನ್ನು ಹೇರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ.
ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಸಂವಿಧಾನವನ್ನು ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆಯ ಹಿತದೃಷ್ಟಿಯಿಂದ ರಚಿಸಲಾಗಿದೆ. ಎಲ್ಲಾ ನಾಗರೀಕರು ಅಂಗೀಕರಿಸಿ, ಪಾಲಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಗೆ ರಚಿತವಾದ ಕಾಯಿದೆಯಾಗಿದೆ ಸಂವಿಧಾನ. ಸರ್ವ ಸಮಾಜದ ಕಲ್ಯಾಣವೇ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಗುರಿ ಹಾಗೂ ಸಮಾನತೆ, ನ್ಯಾಯ ಮತ್ತು ಸಹೋದರತ್ವದ ಮೇಲೆ ಆಧಾರಿತವಾಗಿದೆ. ಪ್ರಜಾಪ್ರಭುತ್ವ ಒಂದು ಗುರಿ ಮತ್ತು ಪ್ರಕ್ರಿಯೆ. ಈ ಗುರಿಯನ್ನು ಸಾಕಾರಗೊಳಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನು ಪಾತ್ರನು. ಪ್ರಜಾಪ್ರಭುತ್ವದ ಸುಂದರವಾದ ಆದರ್ಶವನ್ನು ಎಲ್ಲರಿಗೂ ಪಸರಿಸಿದರೆ ಪ್ರಜಾಪ್ರಭುತ್ವದ ನಿಜವಾದ ಗುರಿ ವಾಸ್ತವೀಕರಣಗೊಳ್ಳುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ.
ಈ ಹಕ್ಕಿನ ಅನ್ವಯ ಹಸ್ತಕ್ಷೇಪವಿಲ್ಲದೆ ಅಭಿಪ್ರಾಯಗಳನ್ನು ಹೊಂದಲು ಮತ್ತು ಆಲೋಚನೆಗಳನ್ನು ಹುಡುಕುವ, ಸ್ವೀಕರಿಸುವ ಮತ್ತು ನೀಡುವ ಸ್ವಾತಂತ್ರ್ಯವನ್ನು ಒಳಗೊಂಡಿದೆ. ಅದರೊಂದಿಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಮೇಲೆ ಸಮಾಜಘಾತುಕ ಹೇಳಿಕೆ, ಜಾತಿ ಅಥವ ವ್ಯಕ್ತಿ ನಿಂದನೆಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹೇಳಿಕೆಗಳನ್ನು ನೀಡಿದರೆ ಅಂತವರ ಮೇಲೆ ಸೂಕ್ತವಾದ ಶಿಕ್ಷೆ ಕೊಡಿಸಲು ಸಂವಿಧಾನ ಮತ್ತು ಕಾನೂನಿನಲ್ಲಿ ಅವಕಾಶವಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು, ಅಬ್ರಹಾಂ ಲಿಂಕನ್ ಅವರ “Democracy is of the people, for the people, by the people.” ಪ್ರಜಾಪ್ರಭುತ್ವವು ಜನರಿಂದ, ಜನರಿಗಾಗಿ.
ಎಂಬ ಪ್ರಸಿದ್ಧ ನುಡಿಗಟ್ಟನ್ನು ಜನರ ಹಕ್ಕುಗಳಿಗಾಗಿ ಗಟ್ಟಿಯಾಗಿ ನಿಲ್ಲುವಂತೆ ಎಲ್ಲರೂ ಒತ್ತಾಯಿಸುವುದಾದರೆ ಪ್ರಜಾಪ್ರಭುತ್ವದ ಮೌಲ್ಯವನ್ನು ಕಾಪಾಡಿಕೊಳ್ಳಬಹುದು.
ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರುವುದು ಮುಖ್ಯವಾದ್ದರಿಂದ ಪ್ರಜೆಗಳಾದ ನಮ್ಮ ಹೆಜ್ಜೆಯನ್ನು ಸರಿಯಾದ ಜಾಗದಲ್ಲಿ ಸರಿಯಾಗಿ ಇಡುವುದರ ಜೊತೆಗೆ ನಮ್ಮ ಚಿಂತನೆಗಳನ್ನು ಒಳ್ಳೆಯ ಕಾರ್ಯದಲ್ಲಿ ಚಿಂತಿಸದೆ ಚಿಂತನೆ ಮಾಡೋಣ.