ಬಂಟ್ವಾಳ: ಸ್ಕೂಟರ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು ಇದರ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಮೂಲತಃ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ ಪ್ರಸಕ್ತ ಪಾಣೆಮಂಗಳೂರು – ಆಲಡ್ಕದಲ್ಲಿ ವಾಸ್ತವ್ಯವಿದ್ದ ಅಶ್ರಫ್ (32) ಎಂದು ಗುರುತಿಸಲಾಗಿದೆ.
ಈ ಒಂದು ಅಪಘಾತ ಸಂಭವಿಸಿದ್ದು ಈತ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ತೆರಳಿದ್ದ ವೇಳೆ ಎನ್ನಲಾಗಿದೆ.
ಅಶ್ರಫ್ ಇಂದು ಮುಂಜಾನೆ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ಆಲಡ್ಕ ನಿವಾಸಿ ತಸ್ವೀರ್ ಎಂಬವರನ್ನು ತನ್ನ ಸ್ಕೂಟರ್ ನಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿರುವ ಅಂಗಡಿಗೆ ಬಿಡಲು ತೆರಳಿದ್ದರು.
ಹಾಗೆ 5:30ರ ಸುಮಾರಿಗೆ ಕೈಕಂಬಕ್ಕೆ ತಲುಪಿದ ಇವರು ತಸ್ವೀರ್ ರನ್ನು ಸ್ಕೂಟರ್ ನಿಂದ ಇಳಿಸಬೇಕು ಅನ್ನುವಷ್ಟರಲ್ಲಿ ಅದೇ ಅಂಗಡಿಗೆ ತರಕಾರಿ ತಂದು ಹಿಂದಿರುಗುತ್ತಿದ್ದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಹಿಂಬದಿಗೆ ಚಲಿಸಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿದ್ದಾರೆ.
ಘಟನೆಯಿಂದ ಇಬ್ಬರಿಗೂ ಗಾಯಗಳಾಗಿದ್ದು, ಗಂಭೀರ ಗಾಯಗೊಂಡಿದ್ದ ಅಶ್ರಫ್ ರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.