dtvkannada

'; } else { echo "Sorry! You are Blocked from seeing the Ads"; } ?>

✍️ಬರಹ: ಸಿಶೇ ಕಜೆಮಾರ್ ಪತ್ರಕರ್ತರು ಪುತ್ತೂರು

ಪುತ್ತೂರು: ಪ್ರಾಣವೇ ಹೋದರೆ ಮತ್ತೇನು ಸಾಧಿಸಲಿಕ್ಕಿದೆ. ಜೀವದಲ್ಲಿದ್ದರೆ ತಾನೆ ಹುಚ್ಚು ಸಾಹಸಗಳನ್ನು ಮಾಡಲು ಸಾಧ್ಯ. ಈ ಜೀವವೇ ಹೊರಟು ಹೋದರೆ ಇನ್ನೇನು ಇದೆ. ಅದಕ್ಕಾಗಿಯೇ ಎಲ್ಲಕ್ಕಿಂತ ಅಮೂಲ್ಯವಾದದ್ದು ನಮ್ಮ ಜೀವ. ದೇವರು ಕೊಟ್ಟ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳುವುದೇ ದೊಡ್ಡ ಸಾಧನೆ ಅದರಿಂದಲೇ ಎಲ್ಲಾ ಸಾಧನೆಗಳನ್ನು ಮಾಡಲು ಸಾಧ್ಯ. ಇತ್ತೀಚಿನ ಕೆಲವು ದಿನಗಳಲ್ಲಿ ಅಪಘಾತ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ಅದರಲ್ಲೂ ದ್ವಿಚಕ್ರ ವಾಹನ ಸವಾರರೇ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಗಮನಿಸಿದರೆ ನಮ್ಮ ಸುತ್ತಮುತ್ತಲಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ೧೦ ಕ್ಕೂ ಅಧಿಕ ಮಂದಿ ಯುವಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಪಘಾತಗಳಿಗೆ ಕಾರಣಗಳೇನು ಎಂಬುದನ್ನು ಹುಡುಕುತ್ತಾ ಹೋದರೆ ಮುಖ್ಯವಾಗಿ ಕಾಣುವುದು ಸ್ಪೀಡ್ ಕ್ರೇಜ್ ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆ. ವಾಹನ ಚಾಲಕರ ಸ್ಪೀಡ್ ಕ್ರೇಜ್‌ನಿಂದಾಗಿಯೇ ಇಂದು ಬಹಳಷ್ಟು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಸ್ಪೀಡ್ ಕ್ರೇಜ್…ಪ್ರಾಣಕ್ಕೆ ಕುತ್ತು ತರದಿರಲಿ..!

'; } else { echo "Sorry! You are Blocked from seeing the Ads"; } ?>

ಅತಿಯಾದ ವೇಗವೇ ಅಪಘಾತಗಳಿಗೆ ಮುಖ್ಯ ಕಾರಣ. ಇತ್ತೀಚಿನ ದಿನಗಳಲ್ಲಿ ವಾಹನ ಚಾಲಕರಲ್ಲಿ ಹೆಚ್ಚುತ್ತಿರುವ ಸ್ಪೀಡ್ ಕ್ರೇಜ್‌ನಿಂದಾಗಿ ಇಂದು ಬಹಳಷ್ಟು ಮಂದಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನ ಹತ್ತಿದರೆ ಸಾಕು ಯುವಕರಲ್ಲಿ ಸ್ಪೀಡ್ ಕ್ರೇಜ್ ಹುಟ್ಟಿಕೊಳ್ಳುತ್ತದೆ. ನಾನು ಎಲ್ಲರಿಗಿಂತ ವೇಗವಾಗಿ ಬೈಕ್ ಓಡಿಸಬೇಕು, ಸ್ಕೂಟರ್ ಚಲಾಯಿಸಬೇಕು ಎಂಬ ಹುಚ್ಚು ಸಾಹಸವೇ ಅಪಘಾತಗಳಿಗೆ ನಾಂದಿ ಹಾಡುತ್ತವೆ. ಅತೀ ವೇಗದ ಚಾಲನೆಯಿಂದ ಇಂದಲ್ಲ ನಾಳೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ನಾವು ವಾಹನಗಳನ್ನು ವೇಗದಿಂದ ರೇಸ್ ಥರ ಚಾಲನೆ ಮಾಡುವುದರಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ನಮ್ಮ ವೇಗ, ಸ್ಪೀಡ್ ಏನಿದ್ದರೂ ನಮ್ಮ ಬದುಕಿನ ಗುರಿಯ ಮೇಲಿರಬೇಕೇ ಹೊರತು ನಾವು ಚಲಾಯಿಸುವ ವಾಹನದ ಎಕ್ಸಿಲೇಟರ್ ಮೇಲಲ್ಲ. ಇದನ್ನು ನಾವು ತಿಳಿದುಕೊಳ್ಳಬೇಕಾಗಿದೆ.
ಸಂಚಾರಿ ನಿಯಮಗಳ ಉಲ್ಲಂಘನೆ
ಆರ್‌ಟಿಒ ಅಧಿಕಾರಿಗಳು ಕೆಲವೊಂದು ಸಂಚಾರಿ ನಿಯಮಗಳನ್ನು ಜಾರಿ ಮಾಡಿರುತ್ತಾರೆ. ನಾವು ವಾಹನ ಕಲಿಕೆಯ ಸಂದರ್ಭದಲ್ಲಿ ನಮಗೆ ಸಂಚಾರಿ ನಿಯಮಗಳನ್ನು ತಿಳಿಸಿಕೊಡಲಾಗುತ್ತದೆ.

ಎಲ್ಲಿ ಎಷ್ಟು ವೇಗದಲ್ಲಿ ವಾಹನವನ್ನು ಚಲಾಯಿಸಬೇಕು ಸೇರಿದಂತೆ ವಾಹನ ಚಾಲನೆಯ ಎಲ್ಲಾ ನಿಯಮಗಳನ್ನು ನಾವು ಓದಿಕೊಂಡಿರುತ್ತೇವೆ. ಆದರೆ ಈ ನಿಯಮಗಳನ್ನು ನಾವು ವಾಹನ ಚಲಾವಣೆಯ ಸಮಯದಲ್ಲಿ ಪಾಲನೆ ಮಾಡುವುದೇ ಇಲ್ಲ. ಇದೇ ಅಪಘಾತಗಳಿಗೆ ಕಾರಣವಾಗುತ್ತದೆ. ಹಿಂದುಮುಂದು ನೋಡದೆ ವಾಹನವನ್ನು ಹೈವೇಗೆ ನುಗ್ಗಿಸುವುದು, ರಸ್ತೆ ಕ್ರಾಸ್ ಮಾಡುವುದು, ಓವರ್‌ಟೇಕ್ ಮಾಡುವುದು, ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು, ರಾಂಗ್ ಸೈಡಲ್ಲಿ ವಾಹನ ಓಡಿಸುವುದು, ಇಂಡಿಕೇಟರ್ ಹಾಕದೆ ವಾಹನ ತಿರುಗಿಸುವುದು, ರಸ್ತೆ ಸೂಚನೆಗಳನ್ನು ಪಾಲಿಸದೆ ವಾಹನ ಚಲಾಯಿಸುವುದು ಇತ್ಯಾದಿಗಳು ಅಪಘಾತಕ್ಕೆ ಕಾರಣವಾಗುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಸುರಕ್ಷತೆಗಳನ್ನು ಪಾಲನೆ ಮಾಡದೇ ಇರುವುದು
ದ್ವಿಚಕ್ರ ವಾಹನ ಅಪಘಾತದಲ್ಲಿ ಬಹುತೇಕ ಮಂದಿ ತಲೆಗೆ ಪೆಟ್ಟು ಬಿದ್ದೇ ಸಾವನ್ನಪ್ಪುತ್ತಾರೆ. ಹೀಗೆ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಹೆಲ್ಮೆಟ್ ಧರಿಸಿರುವುದೇ ಇಲ್ಲ. ಹೆಲ್ಮೆಟ್ ಧರಿಸಿದ್ದರೂ ಅದು ಫ್ಯಾನ್ಸಿ ಹೆಲ್ಮೆಟ್ ಆಗಿರುತ್ತದೆ. ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ ಚಾಲನೆ ವೇಳೆ ನಾವು ಐಎಸ್‌ಐ ಮಾರ್ಕ್ ಹೊಂದಿದ ಗುಣಮಟ್ಟದ ಹೆಲ್ಮೆಟ್ ಧರಿಸಿರಲೇಬೇಕು. ಸವಾರ ಹಾಗೂ ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸಬೇಕು. ಕೆಲವರು ಹೆಲ್ಮೆಟ್ ಇದ್ದರೂ ಅದನ್ನು ಬೈಕ್,ಸ್ಕೂಟರ್‌ನ ಗ್ಲಾಸ್‌ಗೆ ನೇತಾಡಿಕೊಂಡೋ ಅಥವಾ ಕೈಗೆ ಸಿಕ್ಕಿಸಿಕೊಂಡೇ ಅಥವಾ ತಲೆಯ ಮೇಲೆ ಅರ್ಧ ಇಟ್ಟುಕೊಂಡೋ ಬೈಕ್ ಚಾಲನೆ ಮಾಡುತ್ತಾರೆ. ಎಲ್ಲಿಯಾದರೂ ಪೊಲೀಸರು ಇದ್ದಾರೆ ಅಂತ ಗೊತ್ತಾದ ಕೂಡಲೇ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ.
ವಾಹನ ಚಾಲನೆ ವೇಳೆ ಮೊಬೈಲ್ ಸೈಡಿಗಿರಲಿ…
ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು ಕೂಡ ಅಪಘಾತಕ್ಕೆ ಕಾರಣವಾಗುತ್ತದೆ. ಫೋನ್ ಸಂಭಾಷಣೆ ನಮ್ಮ ಗಮನವನ್ನು ಬೇರೆಡೆಗೆ ಕೊಂಡೊಯ್ಯುವ ಸಾಧ್ಯತೆ ಇರುವುದರಿಂದ ನಮಗೆ ವಾಹನ ಚಾಲನೆ ಮೇಲೆ ಹತೋಟಿ ತಪ್ಪುತ್ತದೆ. ಇದರಿಂದಾಗಿಯೇ ಬಹಳಷ್ಟು ಅಪಘಾತಗಳು ಸಂಭವಿಸುತ್ತವೆ. ಒಂದು ಕೈಯಲ್ಲಿ ಮೊಬೈಲ್, ಇನ್ನೊಂದು ಕೈಯಲ್ಲಿ ಬೈಕ್‌ನ ಎಕ್ಸಿಲೇಟರ್ ಅಥವಾ ಕಾರಿನ ಸ್ಟೇರಿಂಗ್..ಈ ರೀತಿಯ ಚಾಲನೆಯಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಇದೆಲ್ಲವು ನಮಗೆ ಗೊತ್ತಿದೆ ಹಾಗಿದ್ದರೂ ನಾವು ಅದೇ ತಪ್ಪನ್ನು ಪದೇ ಪದೇ ಮಾಡುತ್ತೇವೆ.
ವಾಹನದಲ್ಲಿ ಅವಸರ ಬೇಡವೇ ಬೇಡ…!

ಇಂದು ಎಲ್ಲಾ ಕಡೆ ರಸ್ತೆಗಳು ಬಹಳ ಚೆನ್ನಾಗಿವೆ ಹಾಗಂತ ವಾಹನ ಚಾಲನೆ ವೇಳೆ ಅವಸರ ಬೇಡವೇ ಬೇಡ. ಅವಸರವೇ ಅಪಘಾತಕ್ಕೆ ಕಾರಣವಾಗಬಲ್ಲದು. ರ್‍ಯಾಸ್ ಡ್ರೈವಿಂಗ್ ನಮ್ಮ ಜೀವಕ್ಕೆ ಕುತ್ತು ತರಬಲ್ಲದು ಆದ್ದರಿಂದ ಸಂಚಾರಿ ನಿಯಮಗಳನ್ನು ಪಾಲನೆ ಮಾಡಿಕೊಂಡು ವಾಹನ ಚಾಲನೆ ಮಾಡುವುದು ಸೂಕ್ತ. ಸ್ವಲ್ಪ ಜಾಗ ಸಿಕ್ಕರೂ ವಾಹನವನ್ನು ನುಗ್ಗಿಸುವ ಕೆಲಸಕ್ಕೆ ಕೈ ಹಾಕಬಾರದು, ಓವರ್‌ಟೇಕ್ ಮಾಡುವ ಮುನ್ನ ಸರಿಯಾಗಿ ಯೋಚಿಸುವುದು ಒಳಿತು. ಏಕೆಂದರೆ ವಾಹನದಲ್ಲಿ ಕುಳಿತವರು ಚಾಲಕವನ್ನು ನಂಬಿಕೊಂಡಿರುತ್ತಾರೆ. ಸೇಪ್ ಆಗಿ ನಮ್ಮನ್ನು ಸೇರುವಲ್ಲಿಗೆ ಸೇರಿಸುತ್ತಾನೆ ಎಂಬ ನಂಬಿಕೆ ಅವರಲ್ಲಿರುತ್ತದೆ. ಆದ್ದರಿಂದ ಚಾಲಕನಾದವನು ಎಷ್ಟು ಸೇಪ್ ಆಗಿ ವಾಹನವನ್ನು ಚಾಲನೆ ಮಾಡುತ್ತಾನೋ ಅದು ಅವನಿಗೆ ಮತ್ತು ಅವನನ್ನು ನಂಬಿದವರಿಗೆ ಒಳ್ಳೆಯದು.


ಚಾಲನೆ ಬಗ್ಗೆ ಮಾಹಿತಿಯ ಕೊರತೆ
ಮುಖ್ಯವಾಗಿ ಯುವಕರಲ್ಲಿ ಚಾಲನೆ ಬಗ್ಗೆ ಇರುವ ಮಾಹಿತಿಯ ಕೊರತೆಯಿಂದಲೇ ಇಂದು ಅಪಘಾತಗಳು ಜಾಸ್ತಿಯಾಗುತ್ತಿವೆ. ವಾಹನ ಪರವಾನಗೆ ಪಡೆಯುವ ಮುನ್ನ ಚಾಲನೆ ಬಗ್ಗೆ ಸರಿಯಾದ ಮಾಹಿತಿ ಕೊಡುವುದು ಅಗತ್ಯ. ಈ ನಿಟ್ಟಿನಲ್ಲಿ ಆರ್‌ಟಿಓ ಕ್ರಮ ಕೈಗೊಳ್ಳಬೇಕಾಗಿದೆ. ಹಿಂದಿನ ಕಾಲದ ಡ್ರೈವಿಂಗ್ ಟೆಸ್ಟ್ ಇಂದು ಇಲ್ಲದೇ ಇರುವುದು ಮತ್ತು ಸುಲಭವಾಗಿ ಲೈಸನ್ಸ್ ಪಡೆಯಬಹುದು ಇದು ಕೂಡ ಅಪಘಾತಗಳಿಗೆ ಕಾರಣವಾಗಬಲ್ಲದು ಎನ್ನುತ್ತಾರೆ ನುರಿತ ಚಾಲಕರು. ಅತೀಯಾದ ವೇಗದ ಚಾಲನೆಯನ್ನು ತಡೆಯುವಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸುವ ಮೂಲಕ ಪೊಲೀಸರು ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಒಂದೇ ವಾರದಲ್ಲಿ ೧೦ ಕ್ಕೂ ಅಧಿಕ ಸಾವು
ಪುತ್ತೂರು ಆಸುಪಾಸಿನಲ್ಲಿ ಕಳೆದ ೧ ವಾರದಲ್ಲಿ ಅಪಘಾತ ಪ್ರಕರಣಗಳನ್ನು ಗಮನಿಸಿದರೆ ೧೦ ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಕೌಡಿಚ್ಚಾರ್‌ನಲ್ಲಿ ಬೈಕ್‌ಗೆ ಪಿಕ್‌ಅಪ್ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು, ಕಲ್ಲರ್ಪೆಯಲ್ಲಿ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವು, ಉಪ್ಪಿನಂಗಡಿಯಲ್ಲಿ ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರ ಸಾವು, ಪೋಳ್ಯದಲ್ಲಿ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತ್ಯು, ವಿಟ್ಲದಲ್ಲಿ ಅಟೋ ರಿಕ್ಷಾ ಅಪಘಾತದಲ್ಲಿ ಓರ್ವ ಮೃತ್ಯು ಹೀಗೆ ಸಾವಿನ ಸಂಖ್ಯೆ ಹೆಚ್ಚುತ್ತಲೆ ಹೋಗುತ್ತದೆ. ವೇಗದ ಮೇಲೆ ಹಿಡಿತವಿರಲಿ…ಒಮ್ಮೆ ಹೋದ ಜೀವ ಮತ್ತೆಂದೂ ಬರದು..

'; } else { echo "Sorry! You are Blocked from seeing the Ads"; } ?>


ವಾಹನ ಚಾಲನೆ ಬಗ್ಗೆ ಮಾಹಿತಿಯ ಕೊರತೆಯಿಂದಲೇ ಇಂದು ಅಧಿಕ ಅಪಘಾತಗಳು ಸಂಭವಿಸುತ್ತವೆ. ಎಕ್ಸಿಲೇಟರ್ ಕೊಟ್ಟರೆ ಮಾತ್ರ ತಾನೆ ವಾಹನ ಜಾಸ್ತಿ ಸ್ಪೀಡ್ ತೆಗೆದುಕೊಳ್ಳುವುದು, ವೇಗ ಮಿತಿಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ಬಗ್ಗೆ ನಮಗೆ ಜಾಗೃತೆ ಇರಬೇಕಾಗಿದೆ. ಎಲ್ಲದಕ್ಕೂ ಹೆಚ್ಚಾಗಿ ಚಾಲನೆ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಸೂಕ್ತ.
– ಕೂಸಪ್ಪ ಗೌಡ ಶೇಖಮಲೆ, (ಅಪಘಾತ ರಹಿತ ಚಾಲನೆಗೆ ಬೆಳ್ಳಿ ಪದಕ ಪುರಸ್ಕೃತರು) ನಿವೃತ್ತ ಕೆಎಸ್‌ಆರ್‌ಟಿಸಿ ಡ್ರೈವರ್

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!