ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ರವಿವಾರ ನಡೆದ ಗುಂಡಿನ ದಾಳಿಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಟೋಯ್ ನ ಸಹೋದರ ಅನ್ನೋಲ್ ಬಿಷ್ಟೋಯ್ ವಹಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.
ವಿವಿಧ ಪ್ರಕರಣಗಳಲ್ಲಿ ಭಾರತದಲ್ಲಿ ವಾಂಟೆಡ್ ಆಗಿರುವ ಅನ್ನೋಲ್ ಅಮೆರಿಕದಲ್ಲಿ ತಲೆಮರೆಸಿಕೊಂಡ ಬಗ್ಗೆ ಮಾಹಿತಿಯಿದ್ದು ಈತ ಬಲು ದೊಡ್ಡ ಗ್ಯಾಂಗ್ ಸ್ಟಾರ್ ಆಗಿದ್ದಾನೆ.
ಸಲ್ಮಾನ್ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಅನ್ನೋಲ್, ಇದು ಕೇವಲ “ಟ್ರೇಲರ್” ಎಂದು ಹೇಳಿದ್ದಾನೆ.
“ನಮಗೆ ಶಾಂತಿ ಬೇಕು. ದಬ್ಬಾಳಿಕೆಯ ವಿರುದ್ಧದ ಏಕೈಕ ನಿರ್ಧಾರ ಯುದ್ಧವಾಗಿದ್ದರೆ, ಆಗಲಿ. ಸಲ್ಮಾನ್ ಖಾನ್, ನಾವು ನಿಮಗೆ ಟ್ರೇಲರ್ ಅನ್ನು ತೋರಿಸಿದ್ದೇವೆ, ಇದರಿಂದ ನೀವು ನಮ್ಮ ಶಕ್ತಿಯ ಪ್ರಮಾಣವನ್ನು ಅರ್ಥಮಾಡಿಕೊಳ್ಳುತ್ತೀರಿ, ಅದನ್ನು ಮತ್ತೆ ಪರೀಕ್ಷಿಸಬೇಡಿ. ಇದು ಮೊದಲ ಮತ್ತು ಕೊನೆಯದು. ಇದರ ನಂತರ, ಮನೆಯ ಹೊರಗೆ ಗುಂಡು ಹಾರಿಸುವುದಿಲ್ಲ. ನಮ್ಮ ಬಳಿ ನೀವು ದೇವರೆಂದು ಭಾವಿಸುವ ದಾವೂದ್ ಇಬ್ರಾಹಿಂ ಮತ್ತು ಚೋಟಾ ಶಕೀಲ್ ಹೆಸರಿನ ನಾಯಿಗಳಿವೆ, ನಾನು ಈಗ ಹೆಚ್ಚು ಮಾತನಾಡುವ ಅಭ್ಯಾಸವನ್ನು ಹೊಂದಿಲ್ಲ” ಎಂದು ಅನ್ನೋಲ್ ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶ ನೀಡಿದ್ದಾನೆ.
ರವಿವಾರ ಮುಂಜಾನೆ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನಾಲ್ಕು ಸುತ್ತಿನ ಬುಲೆಟ್‌ಗಳನ್ನು ಹಾರಿಸಿದ್ದರು. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮುಂಜಾನೆ 4.51 ರ ಸುಮಾರಿಗೆ ನಡೆದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅದಾಗ್ಯೂ, ಸಲ್ಮಾನ್ ಖಾನ್ ಮನೆಯ ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಅಪರಾಧ ವಿಭಾಗ, ಸ್ಥಳೀಯ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಖಾನ್ ಅವರ ಮನೆಯ ಹೊರಗೆ ಹಾರಿಸಲಾದ ಗುಂಡುಗಳ ಶೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಟೋಯ್ ಮತ್ತು ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಈ ಹಿಂದೆ ಹಲವಾರು ಬಾರಿ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದರು. ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆವಾಲಾ ಅವರ ಹತ್ಯೆಯನ್ನು ಲಾರೆನ್ಸ್ ಬಿಷ್ಟೋಯ್ ಅವರ ಗ್ಯಾಂಗ್ ಮಾಡಿತ್ತು.
ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಅನ್ನೋಲ್ ಬಿಷ್ಟೋಯ್ ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದು, ಆತ ನಕಲಿ ಪಾಸ್‌ಪೋರ್ಟ್‌ನಲ್ಲಿ ಭಾರತದಿಂದ ಪರಾರಿಯಾಗಿದ್ದಾನೆ.