dtvkannada

ಮಂಗಳೂರು, ಸೆ.2 : ಬೆಂಗಳೂರಿನ ಮೆಟ್ರೋ ರೈಲು ಸಂಪರ್ಕ ಜಾಲದ ಹೊಸ ಮಾರ್ಗವೊಂದರ ಉದ್ಘಾಟನೆಗೆ ಸಂಬಂಧಿಸಿದ ಜಾಹೀರಾತೊಂದು ಕನ್ನಡದ 8 ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ವಾರ್ತಾಭಾರತಿ ಪತ್ರಿಕೆಯಲ್ಲಿ ಈ ಜಾಹಿರಾತು ಇಲ್ಲದಿರುವುದು ಚರ್ಚೆಗೆ ಕಾರಣವಾಗಿದೆ.
ಆ ಅರ್ಧ ಪುಟದ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ದೊಡ್ಡ ಚಿತ್ರಗಳಿದ್ದು, ಕನ್ನಡ ದೈನಿಕ ವಾರ್ತಾಭಾರತಿಯ ಪತ್ರಿಕೆಯಲ್ಲಿ ಈ ಜಾಹೀರಾತು ಇಲ್ಲದೆ ಇರುವುದನ್ನು ಗಮನಿಸಿರಬಹುದು. ಇದೊಂದೇ ಅಲ್ಲ, ಕಳೆದ ವರ್ಷ ಎಪ್ರಿಲ್ ನಿಂದ ಈ ಪತ್ರಿಕೆಗೆ ಕರ್ನಾಟಕ ಸರಕಾರದ ಹೆಚ್ಚು ಕಡಿಮೆ ಎಲ್ಲ ದೊಡ್ಡ ಜಾಹೀರಾತುಗಳು ಕೈತಪ್ಪಿವೆ. ಅಂದರೆ ಈ ಪತ್ರಿಕೆ ಅಧಿಕಾರದಲ್ಲಿರುವವರ ಕೆಂಗಣ್ಣಿಗೆ ಗುರಿಯಾಗಿದೆ.?

2017 ರಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ಪೊಲೀಸರು ವಾರ್ತಾಭಾರತಿ ವರದಿಗಾರನನ್ನು ಬಂಧಿಸಿ ಪತ್ರಿಕೆಗೆ ನೋಟಿಸ್ ಜಾರಿಗೊಳಿಸಿದ್ದರು. ಬಳಿಕ ಕರ್ನಾಟಕ ಹೈಕೋರ್ಟ್ ಆ ನೋಟಿಸ್ ಗೆ ತಡೆ ವಿಧಿಸಿತು. ಅದೇ ವರ್ಷ ವಾರ್ತಾಭಾರತಿಯ ಫೇಸ್ ಬುಕ್ ಪೇಜ್ ಅನ್ನು ಬ್ಲಾಕ್ ಮಾಡಲಾಗಿತ್ತು. ಫೇಸ್ ಬುಕ್ ಬಳಿಕ ಈ ಬ್ಲಾಕ್ ಅನ್ನು ತೆರವುಗೊಳಿಸಿದರೂ ಬ್ಲಾಕ್ ಮಾಡಿದ್ದೇಕೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ವಿವರಣೆ ನೀಡಿಲ್ಲ.
ಆದರೆ ಮಂಗಳೂರಿನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳು ಹಾಗು ಆ ಬಳಿಕ ನಡೆದ ಹಿಂಸಾಚಾರದ ಬಗ್ಗೆ ವರದಿ ಮಾಡಿದ ನಂತರ ವಾರ್ತಾಭಾರತಿಯ ಧ್ವನಿ ಅಡಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂಬುದು ಮಾಧ್ಯಮ ವಿಶ್ಲೇಷಕರ ಅಭಿಪ್ರಾಯ. ಕರ್ನಾಟಕ ಸರಕಾರದ ಜಾಹೀರಾತು ನೀತಿಯ ಪ್ರಕಾರ ವಾರ್ತಾಭಾರತಿ ಉಳಿದೆಲ್ಲ ರಾಜ್ಯ ಮಟ್ಟದ ಪತ್ರಿಕೆಗಳಂತೆಯೇ ಬಜೆಟ್, ಇಲಾಖೆಗಳ ಆದ್ಯತೆ ಹಾಗು ಇತರ ತಾಂತ್ರಿಕ ನಿಯಮಗಳಿಗೆ ಒಳಪಟ್ಟು ಸರಕಾರದ ಮತ್ತು ಅದರ ಇಲಾಖೆಗಳ ಎಲ್ಲ ಜಾಹೀರಾತುಗಳನ್ನು ಪಡೆಯಲು ಅರ್ಹವಾಗಿದೆ. ಆದರೆ, ಕಳೆದ ವರ್ಷ ಎಪ್ರಿಲ್ ಬಳಿಕ ಕರ್ನಾಟಕ ಸರಕಾರದ ಜಾಹೀರಾತು ಬಿಡುಗಡೆ ಮಾಡುವಾಗ ವಾರ್ತಾಭಾರತಿ ಒಂದನ್ನು ಮಾತ್ರ ನಿರಂತರವಾಗಿ ಕೈಬಿಡಲಾಗುತ್ತಿದೆ. ಈ ಅವಧಿಯಲ್ಲಿ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಒಟ್ಟು 73 ಜಾಹೀರಾತುಗಳು ವಾರ್ತಾಭಾರತಿ ಒಂದನ್ನು ಬಿಟ್ಟು ಉಳಿದೆಲ್ಲ ರಾಜ್ಯ ಮಟ್ಟದ ಕನ್ನಡ ದೈನಿಕಗಳಿಗೆ ಸಿಕ್ಕಿದೆ. ಈ ಜಾಹೀರಾತುಗಳನ್ನು ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬಿಡುಗಡೆ ಮಾಡಲಾಗಿದೆ. ಈ ಇಲಾಖೆಗೆ ಡಾ.ಪಿ.ಎಸ್. ಹರ್ಷ ಆಯುಕ್ತರು.

ವಾರ್ತಾ ಇಲಾಖೆ ಆಯುಕ್ತ ಹರ್ಷ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಬರೆದಿರುವ ಪತ್ರದಲ್ಲಿ ” ವಾರ್ತಾಭಾರತಿ ಪತ್ರಿಕೆಗೆ ನಿಯಮಿತವಾಗಿ ಸರಕಾರಿ ಜಾಹೀರಾತುಗಳು ಬರುತ್ತಿಲ್ಲ ಎಂದು ನಮ್ಮ ಗಮನಕ್ಕೆ ತಂದಿದ್ದಾರೆ. ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ ಪತ್ರಿಕೆಗೆ ಜಾಹೀರಾತನ್ನು ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಆಗಿರುವ ಲೋಪವನ್ನು ಸರಿಪಡಿಸಬೇಕು ” ಎಂದು ಹೇಳಿದ್ದಾರೆ.
2003 ರಲ್ಲಿ ಪ್ರಾರಂಭವಾದ ವಾರ್ತಾಭಾರತಿ ದೈನಿಕ ದೀನ ದಲಿತರ ಧ್ವನಿ ಎಂದೇ ಹೆಸರು ಗಳಿಸಿದ ಪತ್ರಿಕೆ. ಮಂಗಳೂರು, ಬೆಂಗಳೂರು ಹಾಗು ಶಿವಮೊಗ್ಗ ಆವೃತ್ತಿಗಳಿಂದ ಪ್ರಕಟವಾಗುತ್ತಿರುವ ಈ ಪತ್ರಿಕೆಯ ಮುದ್ರಣ ಹಾಗು ಎಲ್ಲ ಆನ್ ಲೈನ್ ಆವೃತ್ತಿಗಳ ಮೂಲಕ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಜನರಿಗೆ ಸುದ್ದಿ, ಮಾಹಿತಿ, ವಿಚಾರಗಳು ತಲುಪುತ್ತಿವೆ ಎಂದು ಪತ್ರಿಕೆಯವರು ಮಾಹಿತಿ ನೀಡಿದ್ದಾರೆ. ಪತ್ರಿಕಾ ಬಳಗದಲ್ಲಿ ೨೦೦ಕ್ಕೂ ಹೆಚ್ಚು ಸಿಬ್ಬಂದಿಯಿದ್ದು ಅದರಲ್ಲಿ ಸುಮಾರು 40% ಮುಸ್ಲಿಮರಿದ್ದಾರೆ.

ಸಿಎಎ ಪ್ರತಿಭಟನೆಗಳ ಸುದ್ದಿ ಪ್ರಕಟಿಸಿದ್ದಕ್ಕೆ ತೆರುತ್ತಿರುವ ಬೆಲೆ ?
ಡಿಸೇಂಬರ್ 2019 ರಲ್ಲಿ ಸಂಸತ್ತಿನಲ್ಲಿ ಸಿಎಎ ಕಾಯ್ದೆ ಪಾಸಾದ ಬೆನ್ನಿಗೆ ದೇಶಾದ್ಯಂತ ಅದರ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಹಾಗೆಯೇ ಮಂಗಳೂರಿನಲ್ಲೂ ಡಿಸೇಂಬರ್ 19, 2019 ರಂದು ಅಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ವಿದ್ಯಾರ್ಥಿಗಳು ಪ್ರತಿಭಟನೆಗಾಗಿ ಸೇರಿದ್ದರು. ಆ ದಿನ ಸಂಜೆ 6.29 ಕ್ಕೆ ವಾರ್ತಾಭಾರತಿ ಪ್ರತಿಭಟನೆ ಬೆನ್ನಲ್ಲೇ ನಡೆದ ಪೊಲೀಸ್ ಗೋಲಿಬಾರ್ ಗೆ ನೌಶೀನ್ ಬೆಂಗ್ರೆ ಹಾಗು ಜಲೀಲ್ ಕುದ್ರೋಳಿ ಎಂಬಿಬ್ಬರು ಬಲಿಯಾಗಿದ್ದಾರೆ ಎಂದು ಟ್ವೀಟ್ ಮಾಡಿತು. ಈ ವರದಿ ಪ್ರಕಟಿಸಿದ ಮೊದಲ ಕನ್ನಡ ಮಾಧ್ಯಮ ವಾರ್ತಾಭಾರತಿ.
ಈ ವರದಿ ಪ್ರಕಟ ಆಗುವವರೆಗೂ ಸ್ಥಳೀಯ ಪೊಲೀಸರು ಗೋಲಿಬಾರ್ ನಿಂದ ಇಬ್ಬರು ಬಲಿಯಾದ ಸುದ್ದಿಯನ್ನು ಒಪ್ಪಿಕೊಂಡಿರಲಿಲ್ಲ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ , ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಷ್ಟೇ ಹೇಳಿದ್ದರು. ಬಳಿಕ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧದ ಎಫ್ ಐ ಆರ್ ನಲ್ಲೂ ಈ ಇಬ್ಬರು ಸಾವಿಗೀಡಾದವರ ಹೆಸರನ್ನು ಪೊಲೀಸರು ಸೇರಿಸಿದ್ದರು. ಆಗ ಮಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದವರು ಪಿ ಎಸ್ ಹರ್ಷ.

ಇಬ್ಬರ ಸಾವಿಗೆ ಕಾರಣ ಏನು ಎಂದು ಎಂದು ಪೊಲೀಸರು ಅಧಿಕೃತವಾಗಿ ದೃಢಪಡಿಸಲಿಲ್ಲ. ಗಾಯಗೊಂಡವರು ಆಸ್ಪತ್ರೆಗಳಲ್ಲಿದ್ದಾರೆ ಎಂದಷ್ಟೇ ಹೇಳಿದರು. ಡಿಸೇಂಬರ್ 21ರಂದು ಹರ್ಷ ಪತ್ರಿಕಾಗೋಷ್ಠಿ ನಡೆಸಿದರೂ ಪೊಲೀಸ್ ಗೋಲಿಬಾರ್ ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಹಾರಿಕೆಯ ಉತ್ತರಗಳನ್ನಷ್ಟೇ ನೀಡಿದರು. ಆದರೆ ವಾರ್ತಾಭಾರತಿ ಆಗಲೇ “ನೇರ ಮೂಲಗಳಿಂದ” ಖಚಿತಪಡಿಸಿಕೊಂಡು ಈ ಬಗ್ಗೆ ವರದಿ ಪ್ರಕಟಿಸಿತ್ತು.
“ವಾರ್ತಾಭಾರತಿ ವರದಿಗಾರ ಆಸ್ಪತ್ರೆಯಲ್ಲಿದ್ದರು, ಸಾವಿಗೀಡಾದವರ ಮನೆಯವರ ಜೊತೆ ಮಾತಾಡಿದ್ದರು, ಆಸ್ಪತ್ರೆ ಸಿಬ್ಬಂದಿಗಳಲ್ಲೂ ಖಚಿತಪಡಿಸಿಕೊಂಡಿದ್ದರು ” ಎಂದು ಘಟನೆಯ ಬಗ್ಗೆ ಮಾಹಿತಿ ಇದ್ದ ಮೂಲಗಳು ನ್ಯೂಸ್ ಲಾಂಡ್ರಿಗೆ ತಿಳಿಸಿವೆ. ಈ ಇಡೀ ಪ್ರಕರಣದ ಬಗ್ಗೆ ವಾರ್ತಾಭಾರತಿ ಸವಿವರವಾಗಿ ವರದಿ ಮಾಡಿತ್ತು.

ವಾರ್ತಾಭಾರತಿಗೆ ಕರಾವಳಿ ಜಿಲ್ಲೆಗಳಲ್ಲಿ ವರದಿಗಾರರ ದೊಡ್ಡ ಜಾಲವಿದೆ. ” ಗೋಲಿಬಾರ್ ಕುರಿತು ವರದಿ ಮಾಡಲು ಮಂಗಳೂರಿಗೆ ಬರುವ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ವತಂತ್ರ ಮಾಧ್ಯಮಗಳ ವರದಿಗಾರರಿಗೆ ವಾರ್ತಾಭಾರತಿ ಸಂಪರ್ಕ ಕೇಂದ್ರದಂತಿತ್ತು. ಘಟನೆಯ ಮಾಹಿತಿ ಕಲೆ ಹಾಕಲು, ಸಂಬಂಧಪಟ್ಟವರ ಜೊತೆ ಮಾತಾಡಲು, ಸ್ಥಳಕ್ಕೆ ಹೋಗಿ ವರದಿ ಮಾಡಲು, ಗೋಲಿಬಾರ್ ಬಳಿಕ ಕರ್ಫ್ಯೂ ಹೇರಿ ಇಂಟರ್ನೆಟ್ ಸ್ಥಗಿತಗೊಳಿಸಿದಾಗ ವರದಿ ಮಾಡಿ ಕೇಂದ್ರ ಕಚೇರಿಗೆ ಕಳಿಸಲು ನಮಗೆ ವಾರ್ತಾಭಾರತಿ ಕಚೇರಿ ಬಹಳ ನೆರವಾಗಿತ್ತು” ಎಂದು ಬೆಂಗಳೂರಿನ ಪತ್ರಕರ್ತರೊಬ್ಬರು ನ್ಯೂಸ್ ಲಾಂಡ್ರಿಗೆ ತಿಳಿಸಿದರು.

“ಇದ್ದದ್ದನ್ನು ಇದ್ದ ಹಾಗೆ ವರದಿ ಮಾಡಿದ್ದು ಡಾ. ಹರ್ಷ ಅವರಿಗೆ ಇಷ್ಟವಾಗಲಿಲ್ಲ. ತಾವು ಹೇಳಿದ ಹಾಗೆ ವರದಿ ಪ್ರಕಟಿಸುತ್ತಿಲ್ಲ ಎಂದು ವಾರ್ತಾಭಾರತಿ ಮೇಲೆ ಅವರಿಗೆ ಅಸಮಾಧಾನ ಶುರುವಾಯಿತು” ಎಂದು ವಾರ್ತಾಭಾರತಿಯ ಸಿಬ್ಬಂದಿಯೊಬ್ಬರು ತಿಳಿಸಿದರು.
ಗೋಲಿಬಾರ್ ನಡೆದು 11 ತಿಂಗಳುಗಳ ಬಳಿಕ ಹರ್ಷ ಮಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಿಂದ ವರ್ಗಾವಣೆಯಾಗಿ ರಾಜ್ಯ ವಾರ್ತಾ ಇಲಾಖೆಯ ಆಯುಕ್ತರಾದರು. ಗೋಲಿಬಾರ್ ನಡೆಯುವವರೆಗೆ ಹರ್ಷ ಮಂಗಳೂರಿನ ಪತ್ರಕರ್ತರ ಜೊತೆ ಆತ್ಮೀಯ ಒಡನಾಟ ಹೊಂದಿದ್ದರು. ಆದರೆ ವಾರ್ತಾಭಾರತಿ ಸಹಿತ ಇತರ ಕೆಲವು ವರದಿಗಳಿಂದಲೇ ತನ್ನ ವರ್ಗಾವಣೆಯಾಯಿತು ಎಂದು ಅವರಿಗೆ ಅಸಮಾಧಾನವಾಗಿದ್ದು ಸ್ಪಷ್ಟವಾಗಿತ್ತು.
“ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಹೆಚ್ಚಿನ ಪತ್ರಿಕೆಗಳು ಒಂದೇ ದೃಷ್ಟಿಕೋನದಲ್ಲಿ ವರದಿಗಳನ್ನು ಪ್ರಕಟಿಸಿದ್ದವು. ಆದರೆ ವಾರ್ತಾಭಾರತಿ ದಿಟ್ಟವಾಗಿ ವರದಿ ಮಾಡಿತು. ಹೇಗೆ ಪೊಲೀಸರು ಅಮಾಯಕರ ಮೇಲೆ ಗುಂಡು ಹಾರಿಸಿದರು, ಅದರಲ್ಲಿ ಹರ್ಷ ಅವರ ಪಾತ್ರವೇನು ಎಂಬುದನ್ನು ಬಯಲು ಮಾಡಿತು. ಹಾಗಾಗಿಯೇ, ಈಗ ವಾರ್ತಾ ಇಲಾಖೆ ಕಮಿಷನರ್ ಆಗಿ ಅವರು ವಾರ್ತಾಭಾರತಿಗೆ ಒಂದೂ ಜಾಹೀರಾತು ಸಿಗದಂತೆ ನೋಡಿಕೊಂಡಿದ್ದಾರೆ ” ಎಂದು ವಾರ್ತಾಭಾರತಿಯ ಚಂದಾದಾರ ಹಾಗು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

” ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಈ ವರ್ಷ ಜುಲೈ 25 ರಂದು 2 ವರ್ಷ ಪೂರ್ಣಗೊಳಿಸಿದಾಗ ಹೊಸದಿಗಂತ ಪತ್ರಿಕೆಯಲ್ಲಿ ಹಲವು ಪುಟಗಳ ಜಾಹೀರಾತು ಪ್ರಕಟವಾದವು. ಪ್ರಜಾವಾಣಿ, ವಿಜಯ ಕರ್ನಾಟಕ ಸಹಿತ ಇತರ ಪತ್ರಿಕೆಗಳೂ ಜುಲೈ 26 ರಂದು ಮೂರ್ನಾಲ್ಕು ಪುಟಗಳ ಜಾಹೀರಾತು ಪಡೆದಿದ್ದವು. ಆದರೆ ವಾರ್ತಾಭಾರತಿಗೆ ಒಂದೇ ಒಂದು ಜಾಹೀರಾತು ಕೊಡಲಿಲ್ಲ. ಈ ರೀತಿಯ ಬಹಿಷ್ಕಾರ ಎಲ್ಲೋ ಒಂದೆರಡು ಬಾರಿ ಆಗಿದ್ದಲ್ಲ, ಹೀಗೇ ಹಲವಾರು ಬಾರಿ ವಾರ್ತಾಭಾರತಿಗೆ ಜಾಹೀರಾತು ನಿರಾಕರಿಸಲಾಗಿದೆ ” ಎಂದು ಪ್ರವೀಣ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

“ಇದು ಖಂಡಿತ ಸರಕಾರದ ನಿರ್ಧಾರ ಅಲ್ಲ” ಎಂದು ಈ ವಿಷಯವನ್ನು ಗಮನಿಸುತ್ತಿರುವ ಮೂಲವೊಂದು ನ್ಯೂಸ್ ಲಾಂಡ್ರಿಗೆ ತಿಳಿಸಿದೆ. ” ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ವಾರ್ತಾಭಾರತಿ ಆರಂಭದಿಂದಲೇ ಬಿಜೆಪಿ, ಜೆಡಿಎಸ್ , ಕಾಂಗ್ರೆಸ್ ಎಂಬ ಭೇದವಿಲ್ಲದೆ ಸರಕಾರಗಳ ನೀತಿಗಳನ್ನುವಿಮರ್ಶಿಸುತ್ತಾ ಬಂದಿದೆ. ಒಂದೆರಡು ಬಾರಿ ಬಿಟ್ಟರೆ ಎಂದೂ ರಾಜಕೀಯ ಪಕ್ಷಗಳು ತಮ್ಮ ಕುರಿತ ಟೀಕೆಗೆ ಹೀಗೆ ಜಾಹೀರಾತು ನೀಡದೆ ಸೇಡು ತೀರಿಸಿಕೊಂಡ ನಿದರ್ಶನವಿಲ್ಲ. ಆದರೆ ಇಲ್ಲಿ ಮಾತ್ರ ವಾರ್ತಾಭಾರತಿಯ ಸರಕಾರಿ ಜಾಹೀರಾತು ಆದಾಯವನ್ನು 100% ಕಡಿತಗೊಳಿಸಲಾಗಿದೆ. ಸರಕಾರಿ ಜಾಹೀರಾತು ಬಿಡುಗಡೆಯಲ್ಲಿ ತನಗಿರುವ ಅಧಿಕಾರವನ್ನು ಬಳಸಿಕೊಂಡು ವಾರ್ತಾ ಇಲಾಖೆಯೇ ಈ ರೀತಿಯ ಸೇಡಿನ ಕ್ರಮ ಕೈಗೊಂಡಿದೆ ” ಎನ್ನುತ್ತದೆ ಆ ಮೂಲ.
ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಅವರ ಇಲಾಖೆಯ ಜಾಹೀರಾತನ್ನು ವಾರ್ತಾಭಾರತಿಗೆ ನೀಡುವಂತೆ ಹೇಳಲಾಗಿತ್ತು. ಆದರೆ ವಾರ್ತಾ ಇಲಾಖೆ ಜಾಹೀರಾತು ನೀಡದೆ ಪಟ್ಟಿಯಿಂದ ವಾರ್ತಾಭಾರತಿಯನ್ನು ಕೈಬಿಟ್ಟಿದೆ.

ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಪ್ರಹಾರ; ವಾರ್ತಾಭಾರತಿಯಂತಹ ದಿನಪತ್ರಿಕೆಗಳಿಗೆ ಸರಕಾರಿ ಜಾಹೀರಾತು ಪ್ರಮುಖ ಆದಾಯದ ಮೂಲಗಳಲ್ಲಿ ಒಂದು. ಮುದ್ರಣ ಮತ್ತು ವಿತರಣೆಗೆ ತಗಲುವ ಭಾರೀ ವೆಚ್ಚದ ಒಂದಿಷ್ಟಾದರೂ ಆ ಆದಾಯದಿಂದ ಭರಿಸಬೇಕಾಗುತ್ತದೆ. ಕಳೆದೊಂದು ದಶಕದಿಂದ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ಡಿಜಿಟಲ್ ಮಾಧ್ಯಮಗಳಲ್ಲಿ ಜಾಹೀರಾತು ನೀಡುವತ್ತ ಹೆಚ್ಚು ಗಮನ ಹರಿಸುತ್ತಿವೆ. ಕೊರೊನ ಮತ್ತು ಲಾಕ್ ಡೌನ್ ಬಳಿಕ ಖಾಸಗಿ ಜಾಹೀರಾತುದಾರರ ಮೇಲೆ ಭಾರೀ ಪರಿಣಾಮ ಬೀರಿದ್ದು ಅದರ ನೇರ ಹೊಡೆತ ಬಿದ್ದಿರುವುದು ವಾರ್ತಾಭಾರತಿಯಂತಹ ಪತ್ರಿಕೆಗಳ ಮೇಲೆ.
ಮಾಧ್ಯಮ ರಂಗವನ್ನು ಸಮೀಪದಿಂದ ಗಮನಿಸುತ್ತಿರುವ ವಿಶ್ಲೇಷಕರೊಬ್ಬರ ಪ್ರಕಾರ ” ಪತ್ರಿಕೆ ಮಾರಾಟದಿಂದ ಬರುವ ಆದಾಯ ದಿನಪತ್ರಿಕೆಗಳ ಖರ್ಚು ಭರಿಸಲು ಏನೇನೂ ಸಾಲದು. ಹೀಗಿರುವಾಗ ಸ್ವತಂತ್ರ ಪತ್ರಿಕೆಗಳ ಪತ್ರಿಕಾ ಸ್ವಾತಂತ್ರ್ಯ ಕಾಪಾಡುವಲ್ಲಿ ಮತ್ತು ಅವರ ಆರ್ಥಿಕ ಹೊರೆ ಕಡಿಮೆ ಮಾಡುವಲ್ಲಿ ಸರಕಾರಿ ಜಾಹೀರಾತುಗಳ ಪಾತ್ರ ಮಹತ್ವದ್ದು”.

ತಮಗೆ ಜಾಹೀರಾತು ನಿರಾಕರಿಸುತ್ತಿರುವುದನ್ನು ವಾರ್ತಾಭಾರತಿ ಪತ್ರಿಕೆ ಹಲವು ಬಾರಿ ವಾರ್ತಾ ಇಲಾಖೆ ಆಯುಕ್ತ ಹರ್ಷ ಅವರ ಗಮನಕ್ಕೆ ತಂದಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.
ವಾರ್ತಾಭಾರತಿಗೆ ಜಾಹೀರಾತು ನಿರಾಕರಿಸುತ್ತಿರುವ ಬಗ್ಗೆ ಸಹಾನೂಭೂತಿ ವ್ಯಕ್ತಪಡಿಸಿದ ದಕ್ಷಿಣ ಕನ್ನಡ ಮೂಲದ ಹಿರಿಯ ಬಿಜೆಪಿ ನಾಯಕರೊಬ್ಬರು “ಈ ಪ್ರಕರಣ ಕಣ್ಣಿಗೆ ಕಂಡಷ್ಟು ಸರಳವಿಲ್ಲ. ಇದರ ಹಿಂದೆ ಬೇರೆಯೇ ಏನೋ ಇದೆ ” ಎಂದು ಅಭಿಪ್ರಾಯ ಪಟ್ಟರು. ಬಿಜೆಪಿ ಮೂಲಗಳ ಪ್ರಕಾರ ಡಿಸೇಂಬರ್ 19, 2019 ರಂದು ನಡೆದ ಪೊಲೀಸ್ ಕಾರ್ಯಾಚರಣೆಗೆ ಹಿರಿಯ ಆರೆಸ್ಸೆಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬೆಂಬಲವಿತ್ತು. ಹಾಗಾಗಿ ವಾರ್ತಾಭಾರತಿಗೆ ಜಾಹೀರಾತು ನಿರಾಕರಿಸುವ ಹರ್ಷ ಅವರ ನಿರ್ಧಾರವನ್ನು ಡಾ. ಭಟ್ ಬೆಂಬಲಿಸಿದ್ದಾರೆ.

ಈ ಇಡೀ ಪ್ರಕರಣದ ಬಗ್ಗೆ ಪಿ ಎಸ್ ಹರ್ಷ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ ” ನಾನು ಈ ಬಗ್ಗೆ ಕಮೆಂಟ್ ಮಾಡುವುದಿಲ್ಲ. ಹೆಚ್ಚಿನ ಮಾಹಿತಿಗೆ ನೀವು ವಾರ್ತಾಭಾರತಿ ಸಂಪಾದಕರಲ್ಲಿ ಮಾತಾಡಿ ” ಎಂದು ಬಿಟ್ಟರು.

ಹಿರಿಯ ಲೇಖಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಅವರು ವಾರ್ತಾಭಾರತಿಗೆ ಜಾಹೀರಾತು ನಿರಾಕರಿಸುತ್ತಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ” ವಾರ್ತಾಭಾರತಿ ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ಒಂದು ಎಂದು ಮಾನ್ಯತೆ ಪಡೆದಿದೆ. ವಾರ್ತಾ ಇಲಾಖೆ ನಿಯಮಗಳ ಪ್ರಕಾರ ಇತರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆಯಾಗುವ ಜಾಹೀರಾತು ವಾರ್ತಾಭಾರತಿಗೂ ಸಿಗಬೇಕು. ಆದರೆ ಇಲಾಖೆಯ ಆಯುಕ್ತ ಹರ್ಷ ಅವರು ಆ ಜಾಹೀರಾತುಗಳನ್ನು ನೀಡದಂತೆ ತಡೆಯುವುದು ತಪ್ಪು. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ. ಐಪಿಎಸ್ ಅಧಿಕಾರಿಯಾಗಿ ಅವರು ಕೇವಲ ಸರಕಾರದಿಂದ ಮಾತ್ರ ಆದೇಶ ಪಡೆಯಬೇಕು. ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಸಂಘಟನೆ ಹೇಳಿದಂತೆ ಅವರು ಕೇಳುತ್ತಾರೆ ಎಂದಾದರೆ ಅದು ಅತ್ಯಂತ ಖಂಡನೀಯ. ಅದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ” ಎಂದವರು ನ್ಯೂಸ್ ಲಾಂಡ್ರಿಗೆ ಹೇಳಿದರು.

” ವಾರ್ತಾಭಾರತಿ ಪತ್ರಿಕೆ ಪ್ರಾರಂಭಿಸಿದ್ದು ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷದ ಮುಖವಾಣಿಯಾಗಿ ಅಲ್ಲ. ಆದಾಯ ಗಳಿಸುವುದೂ ಆ ಪತ್ರಿಕೆಯ ಧ್ಯೇಯ ಅಲ್ಲ. ಆ ಪತ್ರಿಕೆ ಸ್ವತಂತ್ರವಾಗಿ, ವಸ್ತುನಿಷ್ಠವಾಗಿ ಸುದ್ದಿ ಪ್ರಕಟಿಸುತ್ತಾ ಬಂದಿದೆ. ಆದರೆ ಆ ಸ್ವಾತಂತ್ರ್ಯದ ಮೇಲೆಯೇ ದಾಳಿ ನಡೆಯುವುದು ಆತಂಕಕಾರಿ ” ಎನ್ನುತ್ತಾರೆ ಆ ವಿಮರ್ಶಕರು.

ಸರಕಾರಿ ಜಾಹೀರಾತು ತಪ್ಪಿದ್ದರಿಂದ ಆದ ನಷ್ಟ ತುಂಬಿಸಲು ವಾರ್ತಾಭಾರತಿ ತನ್ನ ಓದುಗರು ಹಾಗು ವೀಕ್ಷಕರಲ್ಲಿ ತನ್ನ ಆನ್ ಲೈನ್ ಚಂದಾದಾರರಾಗುವಂತೆ ವಿನಂತಿಸಿ ಅಭಿಯಾನ ನಡೆಸುತ್ತಿದೆ. ವಾರ್ತಾಭಾರತಿಯ ಎಲ್ಲ ಆನ್ ಲೈನ್ ತಾಣಗಳಲ್ಲಿ ಓದುಗರು, ವೀಕ್ಷರಿಗೆ ಉಚಿತವಾಗಿ ಸುದ್ದಿ, ಮಾಹಿತಿಗಳನ್ನು ಓದಬಹುದು, ವಿಡಿಯೋಗಳನ್ನು ವೀಕ್ಷಿಸಬಹುದು. ಆ ವ್ಯವಸ್ಥೆಯನ್ನು ಹಾಗೇ ಮುಂದುವರಿಸಲು ಪತ್ರಿಕಾ ಬಳಗ ಬಯಸಿದೆ. ” ಸ್ವತಂತ್ರ ಮಾಧ್ಯಮವನ್ನು ಸರಕಾರ ಹತ್ತಿಕ್ಕಬಾರದು, ಜಾಹೀರಾತು ನೀಡುವಾಗ ತಾರತಮ್ಯ ಮಾಡಬಾರದು ಹಾಗು ನಮಗೆ ಈಗ ಆಗಿರುವ ನಷ್ಟವನ್ನು ಸರಕಾರ ಭರಿಸಬೇಕು” ಎಂದು ಪತ್ರಿಕೆಯ ಆಡಳಿತ ವಾರ್ತಾ ಇಲಾಖೆಗೆ ನೀಡಿರುವ ಮನವಿಯಲ್ಲಿ ಹೇಳಿದೆ.

ಕೃಪೆ: ನ್ಯೂಸ್ ಲ್ಯಾಂಡ್ರಿ

By dtv

Leave a Reply

Your email address will not be published. Required fields are marked *

error: Content is protected !!