ಒಂದೇ ಕುಟುಂಬದ 7 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಸುಟ್ಟು ಕರಕಲಾದ ದಾರುಣ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅತೀ ವೇಗವಾಗಿ ಬಂದ ಕಾರು ಮುಂದೆ ಸಾಗುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.ಇದರಿಂದಾಗಿ ಎರಡೂ ವಾಹನಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದಲ್ಲೇ ಬೆಂಕಿ ಎರಡೂ ವಾಹನಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಇದರಿಂದ ಎರಡೂ ವಾಹನಗಳು ಸುಟ್ಟು ಭಸ್ಮವಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದು, ಇವರೆಲ್ಲಾ ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದೆ.
ಸ್ಫೋಟದ ಸದ್ದು ಕೇಳಿ ಜನರು ಬೆಚ್ಚಿಬಿದ್ದಿದ್ದು ಯಾರಿಗೂ ಏನೂ ಅರ್ಥವಾಗುವ ಮೊದಲೇ ಕಾರು ಮತ್ತು ಟ್ರಕ್ ಬೆಂಕಿಗೆ ಆಹುತಿಯಾಗಿ ಭಸ್ಮವಾಗಿದೆ ಎಂದು ತಿಳಿದು ಬಂದಿದೆ.
ಕಣ್ಣ ಮುಂದೆ ಸುಟ್ಟು ಕರಕಲಾಗುತ್ತಿದ್ದರು ನೆರೆದಿದ್ದ ಜನರು ಏನು ಮಾಡಲಾಗಲಿಲ್ಲ. ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಫತೇಪುರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದರು. ಬಳಿಕ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ. ಆದರೆ ಅಷ್ಟರೊಳಗೆ ಕಾರು-ಟ್ರಕ್ ಸುಟ್ಟು ಕರಕಲಾಗಿದ್ದು ಕಾರಿನಲ್ಲಿದ್ದ ಏಳು ಮಂದಿ ಕೂಡ ಜನರ ಎದುರೇ ಸಜೀವ ದಹನವಾಗಿದ್ದಾರೆ ಎಂದು ತಿಳಿದು ಬಂದಿದೆ.