ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದ ಆರೋಪಿ ಪಿಎಸ್ಐ ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿ ಪಿಎಸ್ಐ ಅರ್ಜುನ್ ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನದ ಒಳಪಡಿಸಿ ಆದೇಶ ನೀಡಿದೆ.
ದಲಿತ ಯುವಕ ಪುನೀತ್ ಗೋಣಿಬೀಡು ಪಿಎಸ್ಐ ಅರ್ಜುನ್ ಅವರು ಮೇ.10 ರಂದು ಗೊಣಿಬೀಡು ಪೊಲೀಸ್ ಠಾಣೆಯಲ್ಲೆ ದೈಹಿಕ ಹಲ್ಲೆ ನಡೆಸಿ ಮೂತ್ರ ಕುಡಿಸಿದ್ದು, ಈ ಸಂಬಂಧ ನೊಂದ ಯುವಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.
ಆ ಬಳಿಕ ಪಿಎಸ್ಐ ವಿರುದ್ಧ ಗೋಣಿಬೀಡು ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಸರ್ಕಾರ ಅರ್ಜುನ್ ಅವರನ್ನು ಅಮಾನತು ಮಾಡಿ ಪ್ರಕರಣದ ತನಿಖೆಯನ್ನು ಸಿಐಡಿ ಗೆ ವಹಿಸಿತ್ತು.
ಪಿಎಸ್ಐ ಅರ್ಜುನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಇದರ ಬೆನ್ನಲ್ಲೇ ಸಿಐಡಿ ನಿನ್ನೆ ಪೊಲೀಸರು ಬೆಂಗಳೂರಿನಲ್ಲಿ ಆರೋಪಿ ಅರ್ಜುನ್ ಅವರನ್ನು ಬಂಧಿಸಿದ್ದು ಗುರುವಾರ ಬೆಳಗ್ಗೆ ಆರೋಪಿ ಅರ್ಜುನ್ ಅವರನ್ನು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆತಂದ ಸಿಐಡಿ ಪೊಳೀಸರ ತಂಡ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮೊದಲನೇ ಜಿಲ್ಲಾ ಸತ್ರ ನ್ಯಾಯಲಯದ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಲತಾ ಆರೋಪಿ ಅರ್ಜುನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದ್ದಾರೆ.