ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿತರಾಗಿ “ಮಧ್ಯಂತರ ಜಾಮೀನು” ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ದಿಲ್ಲಿ ಹೈಕೋರ್ಟ್ ಇಂದು ತಿರಸ್ಕರಿಸಿದೆ.

ದಿಲ್ಲಿ ಸಿಎಂ ಅವರ ಅಧಿಕಾರಾವಧಿ ಮುಗಿಯುವ ತನಕ ಅಥವಾ ಅವರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಯುವ ತನಕ ಅವರಿಗೆ ಜಾಮೀನು ಒದಗಿಸಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿತ್ತು.
ಅರ್ಜಿಯನ್ನು ತಿರಸ್ಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನಮೀತ್ ಪ್ರೀತಂ ಸಿಂಗ್ ಅರೋರಾ ಅವರ ವಿಭಾಗೀಯ ಪೀಠವು ಅರ್ಜಿಯನ್ನು ಯಾವುದೇ ಆಧಾರವಿಲ್ಲದೆ ಸಲ್ಲಿಸಲಾಗಿದೆ. ಪಿಐಎಲ್ ಸಲ್ಲಿಸಲು ಕೇಜ್ರವಾಲ್ ಅಧಿಕಾರ ನೀಡಿದ ಪವರ್ ಆಫ್ ಅಟಾರ್ನಿಯನ್ನು ಅರ್ಜಿದಾರರು ಹೊಂದಿಲ್ಲ ಎಂದು ಹೇಳಿದ ನ್ಯಾಯಾಲಯ ಅರ್ಜಿದಾರನಿಗೆ ರೂ 75,000 ವೆಚ್ಚಗಳನ್ನು ಪಾವತಿಸುವಂತೆ ಆದೇಶಿಸಿದೆ.
ಈ ಪಿಐಎಲ್ ಅನ್ನು “ವಿ, ದಿ ಪೀಪಲ್ ಆಫ್ ಇಂಡಿಯಾ” ಎಂಬ ಹೆಸರಿನಲ್ಲಿ ಸಲ್ಲಿಸಲಾಗಿತ್ತಲ್ಲದೆ. ತಮಗೆ ಯಾವುದೇ ಪ್ರಚಾರ ಬೇಡ ಎಂದು ಹೇಳಿ ಹೆಸರು ಬಳಸಿಲ್ಲ, ತಾವು ದಿಲ್ಲಿ ಜನರನ್ನು ಪ್ರತಿನಿಧಿಸುತ್ತಿರುವುದಾಗಿ ಅರ್ಜಿದಾರ ಹೇಳಿದ್ದರು.