ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೂಸು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯಲ್ಲಿ ಬದುಕುಳಿದಿರುವ ಬಾಲಕಿ, ಮನೆಯಲ್ಲಿದ್ದ ಮೃತದೇಹಗಳ ಜೊತೆಯಲ್ಲೇ ನಾಲ್ಕು ದಿನ ಕಳೆದಿದ್ದಳು ಎಂಬುದು ತನಿಖೆಯಿಂದ ಗೊತ್ತಾಗಿದೆ.
‘ಭಾರತಿ, ಸಿಂಧೂರಾಣಿ, ಸಿಂಚನಾ ಹಾಗೂ ಮಧುಸಾಗರ್ ಅವರು ನೇಣು ಹಾಕಿಕೊಳ್ಳುವ ವೇಳೆ ಮೂರು ವರ್ಷದ ಬಾಲಕಿ ಸ್ಥಳದಲ್ಲಿದ್ದಳು. ಜೊತೆಯಲ್ಲಿ, ಒಂಭತ್ತು ತಿಂಗಳ ಕೂಸು ಸಹ ಹಾಸಿಗೆ ಮೇಲಿತ್ತು. ಅವರಿಬ್ಬರನ್ನು ಬಿಟ್ಟು ನಾಲ್ವರು ಪ್ರತ್ಯೇಕ ಕೊಠಡಿಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆತ್ಮಹತ್ಯೆಗೂ ಮುನ್ನ ಮನೆಯ ಬಾಗಿಲು ಹಾಗೂ ಗೇಟ್ ಬಂದ್ ಮಾಡಲಾಗಿತ್ತು. ಬಾಲಕಿ ಹೊರಗೆ ಹೋಗಲೂ ಅವಕಾಶವೇ ಇರಲಿಲ್ಲ. ನಾಲ್ವರು ನೇಣಿಗೆ ಶರಣಾದರೂ ಏನಾಗಿದೆ ಎಂಬುದು ಬಾಲಕಿಗೆ ಗೊತ್ತಾಗಿರಲಿಲ್ಲ. ನೇತಾಡುತ್ತಿದ್ದ ತನ್ನ ತಾಯಿ ಸಿಂಚನಾ ಅವರ ಕಾಲುಗಳನ್ನು ಹಿಡಿದುಕೊಂಡು ಬಾಲಕಿ ಅತ್ತಿದ್ದಳು. ಮನೆಯಲ್ಲಿದ್ದ ಮೃತದೇಹಗಳ ಬಳಿಯೇ ಓಡಾಡಿ ನಾಲ್ಕು ದಿನ ಕಳೆದಿದ್ದಳು’ ಎಂದೂ ತಿಳಿಸಿವೆ.
‘ಮನೆಯಲ್ಲಿ ಒಂದು ಬಿಸ್ಕತ್ ಬಿಟ್ಟರೆ ತಿನ್ನಲು ಏನು ಇರಲಿಲ್ಲ. ಅದೇ ಬಿಸ್ಕತ್ ತಿಂದು ಬಾಲಕಿ ನಾಲ್ಕು ದಿನ ಬದುಕಿದ್ದಳು. ಪೊಲೀಸರು ಮನೆಯೊಳಗೆ ಹೋಗುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿಯನ್ನು ತ್ವರಿತವಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿ ಬಾಲಕಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ಘಟನೆ ವಿವರಿಸದ ಬಾಲಕಿ : ‘ಘಟನೆಯಿಂದ ಬಾಲಕಿ ಆಘಾತಕ್ಕೆ ಒಳಗಾಗಿದ್ದಾಳೆ. ಘಟನೆ ಬಗ್ಗೆ ವಿವರಿಸುವಷ್ಟು ಮಾತು ಆಕೆಗೆ ಬರುವುದಿಲ್ಲ. ಸದ್ಯ ಸಂಬಂಧಿಕರ ಮನೆಯಲ್ಲಿ ಇದ್ದಾಳೆ. ಬೇರೆ ಊರಿನಲ್ಲಿರುವ ತಂದೆಯ ಸಂಬಂಧಿಕರಿಗೂ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕವೇ ಬಾಲಕಿಯನ್ನು ಮಾತನಾಡಿಸಬೇಕಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ
ಐದು ದಿನ ಶವಗಳ ಮುಂದೆ ಕಣ್ಣಿರಿಟ್ಟು ಬದುಕಿದ ಪ್ರೇಕ್ಷಾ:
ತಾಯಿ, ಚಿಕ್ಕಮ್ಮ, ಅಜ್ಜಿ ಮತ್ತು ಮಾವ ನೇಣಿಗೆ ಶರಣಾದ ಬಳಿಕ ದಿಕ್ಕು ತೋಚದೆ ಮೂರು ವರ್ಷದ ಸಿಂಚನಾ ಪುತ್ರಿ ಪ್ರೇಕ್ಷಾ, ಶವಗಳ ಮುಂದೆಯೇ ಕಣ್ಣಿರು ಸುರಿಸಿ ಅಸ್ವಸ್ಥಗೊಂಡು ಹಾಸಿಗೆ ಪಕ್ಕದಲ್ಲಿ ಬಿದ್ದಿದ್ದಳು. ಪೊಲೀಸರು ಬಾಗಿಲು ಒಡೆದು ಒಳಹೋಗಿ ನೋಡಿದಾಗ ಪ್ರೇಕ್ಷಾ ಬದುಕಿರುವುದನ್ನು ಖಚಿತ ಪಡಿಸಿಕೊಂಡು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐದು ದಿನಗಳಿಂದ ಆಹಾರ ಸೇವಿಸದರಿಂದ ಆಕೆ ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ಹೇಳಿದರು.
ಆಹಾರವಿಲ್ಲದೆ ಮೃತಪಟ್ಟ 9ತಿಂಗಳ ಮಗು:
ಸಿಂಧೂರಾಣಿಯ 9 ತಿಂಗಳ ಮಗು ಹಾಲು, ಆಹಾರವಿಲ್ಲದೆ ಮೃತಪಟ್ಟಿರುವುದು ಪತ್ತೆಯಾಗಿದೆ. ಸೆ.12ರಂದು ಮಗುವಿಗೆ ಹಾಲು ಕುಡಿಸಿ ಬೆಡ್ ಮೇಲೆ ಮಲಗಿಸಿದ್ದಾರೆ. ಅನಂತರ ಮಗುವಿಗೆ ಯಾವುದೇ ಆಹಾರ ಸೇವಿಸಿಲ್ಲ. ಹೀಗಾಗಿ ಮಗು ಮೃತಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭವ್ಯ ಮನೆ ಈಗ ಸಂಪೂರ್ಣ ಖಾಲಿ ಖಾಲಿ:
ಶಂಕರ್ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ವಿಬಾಯಕನಗರದಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಕೆಳ ಮಹಡಿಯನ್ನು ಬಾಡಿಗೆಗೆ ನೀಡಲಾಗಿತ್ತು. ಮೊದಲ ಮಹಡಿಯಲ್ಲಿ ಹಾಲ್, ಕಿಚನ್ ಹಾಗೂ ಒಂದು ಕೊಠಡಿ ಇತ್ತು. ಆ ಕೊಠಡಿಯಲ್ಲಿ ಶಂಕರ್ ಮತ್ತು ಅವರ ಪತ್ನಿ ಭಾರತಿ ಇರುತ್ತಿದ್ದರು. ಅದೇ ಕೊಠಡಿಯಲ್ಲಿ ಕಿರಿಯ ಪುತ್ರಿ ಸಿಂಧುರಾಣಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸಿಂಧುರಾಣಿ ಸತ್ತ ಕೊಠಡಿಯ ಬೆಡ್ ಮೇಲೆ 9 ತಿಂಗಳ ಗಂಡು ಮಗು ಮೃತದೇಹ ಇತ್ತು. ಹಾಲ್ನಲ್ಲಿದ್ದ ಫ್ಯಾನಿಗೆ ಭಾರತಿ ನೇಣು ಬಿಗಿದುಕೊಂಡಿದ್ದಾರೆ. ಎರಡನೇ ಮಹಡಿಯಲ್ಲಿ ಮೂರು ಕೊಠಡಿಗಳಿದ್ದವು. ಮೂವರು ಮಕ್ಕಳಿಗೆ ಮೂರು ಕೊಠಡಿ ಇತ್ತು. ಎರಡು ಪ್ರತ್ಯೇಕ ಕೊಠಡಿಯಲ್ಲಿ ಹಿರಿಯ ಪುತ್ರಿ ಸಿಂಚನ ಮತ್ತು ಮಗ ಮಧುಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧುಸಾಗರ್ ಕೊಠಡಿಯಲ್ಲೇ ಬದುಕುಳಿದ ಮಗು ಪ್ರೇಕ್ಷಾ ಇತ್ತು.