ಬೆಂಗಳೂರು: ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಮತ್ತು ಮೃತ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಆರ್. ಧ್ರುವನಾರಾಯಣ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಇದ್ದರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬಿಜೆಪಿ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಾಂಗ್ರೆಸ್ ನಾಯಕ ನಿಯೋಗ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಾಜೀನಾಮೆ ನೀಡಲಿ: ‘ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಳಗ್ಗೆ ಮಾತನಾಡಿದ ಅವರು, ‘ದೇಶದಲ್ಲಿ ನೀಚ ರಾವಣ ಸರ್ಕಾರ ಅಧಿಕಾರ ನಡೆಸುತ್ತಿದೆ. ಹೀಗಾಗಿ, ಅನ್ನದಾತರು ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.