ಬೆಂಗಳೂರು: ಇನ್ಸ್ಟಾಗ್ರಾಮ್ನಲ್ಲಿ ಯುವತಿಯೊಬ್ಬಳಿಗೆ ಮೆಸೇಜ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ನಲ್ಲಿ ಆಟೋ ಚಾಲಕ ನವೀನ್ ಎಂಬಾತ ಯುವತಿಗೆ ಮೆಸೇಜ್ ಮಾಡಿದ್ದ, ಇದೇ ವಿಚಾರಕ್ಕೆ ಯುವತಿಯ ಪ್ರಿಯಕರ ಪ್ರಜ್ವಲ್ ಮತ್ತು ತಂಡ, ರಾಜಿ ಮಾಡಿಕೊಳ್ಳುವ ಎಂದು ಕರೆದು ನವೀನ್ ಹಾಗೂ ಸ್ನೇಹಿತ ಹರೀಶ್ ಮೇಲೆ ಮರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ತನ್ನ ಹುಡುಗಿಗೆ ಮೆಸೇಜ್ ಮಾಡಿದ್ದಾನೆಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಲೆ ಮತ್ತು ಹೊಟ್ಟೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸೆಪ್ಟೆಂಬರ್ 24 ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಸದ್ಯ ಹಲ್ಲೆ ಮಾಡಿದ ತಂಡವನ್ನು ಬಂಧಿಸಿದ್ದಾರೆ.
ಪ್ರಜ್ವಲ್ ಅಲಿಯಾಸ್ ಕಪ್ಪೆ, ಕಿರಣ ಅಲಿಯಾಸ್ ವಾಲೆ, ಮನೋಜ್, ಮೂರ್ತಿ, ಸಂದೀಪ ಬಂಧಿತ ಆರೋಪಿಗಳು. ಇನ್ನು ನಾಲ್ವರು ತಲೆಮರೆಸಿಕೊಂಡಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.