dtvkannada

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಸತ್ಯಜಿತ್ (72) ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಸೇರಿದಂತೆ ಅನೇಕರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಸುಮಾರು 600 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸತ್ಯಜಿತ್ ಅವರ ಮೂಲ ಹೆಸರು ಬಹುತೇಕರಿಗೆ ಗೊತ್ತಿಲ್ಲ. ಹುಬ್ಬಳ್ಳಿ ಮೂಲದ ಸತ್ಯಜಿತ್ ಅವರ ಮೂಲ ಹೆಸರು ಸೈಯದ್ ನಿಜಾಮುದ್ದೀನ್.

ಸೈಯದ್ ನಿಜಾಮುದ್ದೀನ್ ಅವರು 1986 ರಲ್ಲಿ ಬಿಡುಗಡೆಯಾಗಿದ್ದ ‘ಅಂಕುಶ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಮುಂದೆ ಅವರು ಕೆಲ ಚಿತ್ರಗಳಲ್ಲಿ ಅಭಿನಯಿಸಿದ ನಂತರ ತಮ್ಮ ಹೆಸರನ್ನು ಸತ್ಯಜಿತ್ ಎಂದು ಬದಲಾಯಿಸಿಕೊಂಡರು. ಬಳಿಕ ಅವರು ಅದೇ ಹೆಸರಿನಿಂದ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದರು.

ಖಳ ಪಾತ್ರದಲ್ಲೂ ತಮ್ಮ ಗಮ್ಮತ್ತು ತೋರಿಸಿದ್ದ ಅವರು ಹಾಸ್ಯಪಾತ್ರದಲ್ಲಿ ಹಾಗೂ ಪೋಷಕ ಪಾತ್ರದಲ್ಲೂ ನಟಿಸಿ ಸೈ ಎನಿಸಿಕೊಂಡರು. ನಟ ನಾನಾ ಪಾಟೇಕರ್ ಅವರ ಸಂಪರ್ಕಕ್ಕೆ ಬಂದು ಹಿಂದಿಯ ಕೆಲ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.

ಮಧ್ಯಾಹ್ನ ಅಂತ್ಯಕ್ರಿಯೆ: ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾದ ಸತ್ಯಜಿತ್ ಅವರ ಮೃತದೇಹವನ್ನು ಅವರ ಹೆಗಡೆ‌ನಗರದ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿನ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ವಾರದ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಆರೋಗ್ಯದ ಸಮಸ್ಯೆಗಳ ಜೊತೆ 2016ರಲ್ಲಿ ಗ್ಯಾಂಗ್ರಿನ್‌ಗೆ ತುತ್ತಾಗಿ ಒಂದು ಕಾಲನ್ನು ಸತ್ಯಜಿತ್‌ ಕಳೆದುಕೊಂಡರು. ಬಳಿಕವೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದರು.

ಅವರಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ. ಪುತ್ರಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಪುತ್ರ ಚಿತ್ರರಂಗದಲ್ಲಿ ತೊಡಗಿದ್ದಾರೆ.
ಬೆಳ್ಳಿತೆರೆಯ ಮೇಲೆ ಖಳ, ಪೊಲೀಸ್‌, ಪೋಷಕ ನಟನಾಗಿ ಸತ್ಯಜಿತ್ ಅವರನ್ನು ಕಾಣದವರು ಅಪರೂಪ.

By dtv

Leave a Reply

Your email address will not be published. Required fields are marked *

error: Content is protected !!