ತುಮಕೂರು: 25 ವರ್ಷದ ಯುವತಿ ತನಗಿಂತ 20ವರ್ಷ ಹಿರಿಯ ವ್ಯಕ್ತಿ ಜೊತೆ ಮದುವೆಯಾಗಿ, ಇದೀಗ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಗ್ರಾಮದ 25 ವರ್ಷ ವಯಸ್ಸಿನ ಮೇಘನಾ ಎಂಬಾಕೆಯೇ ತನಗಿಂತ ಇಪ್ಪತ್ತು ವರ್ಷ ಹಿರಿಯ ವ್ಯಕ್ತಿಯಾದ ಇದೇ ತಾಲೂಕಿನ ಚೌಡನಕುಪ್ಪೆ ಗ್ರಾಮ ಸಮೀಪದ ಅಕ್ಕಿಮರಿಪಾಳ್ಯದ ಶಂಕರಣ್ಣ ಎಂಬವರನ್ನು ಮದುವೆಯಾಗಿದ್ದಾಳೆ.
45 ವರ್ಷದ ಶಂಕರಣ್ಣಗೆ ಮದುವೆ ಆಗಿರಲಿಲ್ಲ. ಹೀಗಿರುವಾಗ ಮೇಘನಾ ಅವರ ಬಳಿಕ ತನನ್ನು ಮದುವೆಯಾಗುವಂತೆ ಕೇಳಿದ್ದಾರೆ. ಇದಕ್ಕೆ ಶಂಕರಣ್ಣನೂ ಒಪ್ಪಿಗೆ ಸೂಚಿಸಿದ್ದು, ಇಬ್ಬರೂ ಸಮೀಪದ ದೇವಾಲಯದ ಬಳಿ ಸರಳವಾಗಿ ಮದುವೆಯಗಿದ್ದಾರೆ. ಈ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಗೆ ಕಾರಣವೇನು?
ಮೇಘನಾ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದು, ಈಕೆಗೆ ಬೇರೆಯವರ ಜೊತೆ ಮೊದಲೇ ಒಂದು ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪತಿ ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಪತಿ ಎರಡು ವರ್ಷಗಳಿಂದ ಬಾರದ ಹಿನ್ನೆಲೆಯಲ್ಲಿ ಮೇಘನಾಳೇ ಹೋಗಿ 45 ವರ್ಷದ ವ್ಯಕ್ತಿಯನ್ನ ಮದುವೆಯಾಗಿದ್ದಾಳಂತೆ.
ಮೇಘನಾ ಸ್ವತಃ ಶಂಕರಣ್ಣ ಬಳಿ ಹೋಗಿ ಮದುವೆಯಾಗಿ ಅಂತಾ ಕೇಳಿಕೊಂಡಿದ್ದಾಳೆ. ಈ ವೇಳೆ ಇದುವರೆಗೂ ಮದುವೆಯಾಗದ ಶಂಕರಣ್ಣ ಯುವತಿಯನ್ನ ಒಪ್ಪಿ ಸಮೀಪದ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಇಬ್ಬರು ಮದುವೆಯಾಗಿರುವ ಫೋಟೋ ನೋಡಿ ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.