ಪುತ್ತೂರು: ಅಪ್ರಾಪ್ತ ವಯಸ್ಸಿನ ದಲಿತ ಯುವತಿಯ ಅತ್ಯಾಚಾರ ನಡೆಸಿ, ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಕಾರ್ಯಕರ್ತ ಹಾಗೂ ಆರೆಸ್ಸೆಸ್ ಮುಖಂಡ ಕುದ್ಕಾಡಿ ನಾರಾಯಣ ರೈ ಇಂದು ಪುತ್ತೂರಿನ ನ್ಯಾಯಾಲಯಕ್ಕೆ ಶರಣರಾಗಿದ್ದಾನೆ.
ಪುತ್ತೂರು ತಾಲೂಕಿನ ಬಡಗನ್ನೂರಿನ 17ರ ಹರೆಯದ ದಲಿತ ಸಮುದಾಯದ ಬಾಲಕಿ ಸೆ.5ರಂದು ಮಗುವಿಗೆ ಜನ್ಮ ನೀಡಿದ್ದಳು.ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸೆ.23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164 ನಿಯಮದಡಿ ಹೇಳಿಕೆ ನೀಡಿದ್ದು, ಅದರಲ್ಲಿ ಕುದ್ಕಾಡಿ ನಾರಾಯಣ ರೈ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಳು.
ಈ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ನಾರಾಯಣ ರೈ ತಲೆಮರೆಸಿಕೊಂಡು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ.ಆದರೆ ನ್ಯಾಯಾಲಯ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದೀಗ ಆರೋಪಿ ನಾರಾಯಣ ರೈ ತನ್ನ ಪರ ವಕೀಲರಾದ ಮಹೇಶ್ ಕಜೆ ಜತೆ ಪುತ್ತೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣರಾಗಿದ್ದಾನೆ.
ಆರೋಪಿಯನ್ನು ನ್ಯಾಯಾಲಯ 2 ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.ಈ ಮಧ್ಯೆ ನಾರಾಯಣ ರೈ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಆಗ್ರಹಿಸಿದ್ದರು. ವಾರದ ಹಿಂದೆ ದಲಿತ ಸಮನ್ವಯ ಸಮಿತಿಯು ಸಂಪ್ಯ ಠಾಣೆ ಚಲೋ ಬೃಹತ್ ಪ್ರತಿಭಟನೆಯನ್ನೂ ನಡೆಸಿತ್ತು.