ರಾಯಚೂರು: ಡೆಂಗ್ಯೂ ಜ್ವರಕ್ಕೆ ಮೂವರು ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಮೃತರಿಗೆ ಡೆಂಗ್ಯೂ ಜ್ವರ ಇತ್ತು ಎನ್ನಲಾಗುತ್ತಿದ್ದು, ಮೃತರ ಸಂಬಂಧಿಕರು ಆಸ್ಪತ್ರೆ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ವಿ ಪಟ್ಟಣದ ಕ್ಯೂರಿ ಫಾರ್ಮ ಆಸ್ಪತ್ರೆ ಎದುರು ಪೋಷಕರು ಗಲಾಟೆ ನಡೆಸಿದ್ದಾರೆ. ಮೂವರ ಸಾವಿಗೆ ವೈದ್ಯರೇ ಕಾರಣ ಅಂತ ಆರೋಪಿಸಿದ್ದಾರೆ.ಒಂದೇ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಸೇರಿ ಓರ್ವ ಯುವಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ನವೀನ್, ವೀರೇಶ್ ಮತ್ತು ದೀಪಾ ಮೃತಪಟ್ಟಿದ್ದಾರೆ ಅಂತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ರೋಶ ಹೆಚ್ಚುತ್ತಿದ್ದಂತೆ ವೈದ್ಯ ಭಾನುಪ್ರಕಾಶ್, ಸಿಬ್ಬಂದಿ ಪರಾರಿಯಾಗಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಕಳೆದ 21 ದಿನಗಳಿಂದ ಮಾನ್ವಿ ಪಟ್ಟಣದಲ್ಲಿ ಡೇಂಗ್ಯೂ ಜ್ವರ ಹೆಚ್ಚಳವಾಗುತ್ತಿದೆ.
ಆದರೆ ಜ್ವರ ಹೆಚ್ಚಳವಾದರೂ ಸ್ವಚ್ಚತೆ ಬಗ್ಗೆ ಗಮನ ನೀಡದ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಹೀಗಾಗಿ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ನಿರ್ಲಕ್ಷ್ಯದಿಂದ ಬಡ ಮಕ್ಕಳು ನರಳಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.