ಗುರ್ಗಾಂವ್: ಇಲ್ಲಿನ ತೆರೆದ ಪ್ರದೇಶದಲ್ಲಿ ಮುಸ್ಲಿಮರು ಇಂದು ನಮಾಜ್ ಸಲ್ಲಿಸುವ ವೇಳೆ ಮತ್ತೆ ಕೆಲವು ಹಿಂದೂ ಸಂಘಟನೆಗಳ ಜನರು ಪ್ರತಿಭಟನೆ ನಡೆಸಿದ್ದಾರೆ. ಮುಸ್ಲಿಮರ ನಮಾಜ್ (ಪ್ರಾರ್ಥನೆ) ವಿರುದ್ಧವೇ ಘೋಷಣೆಗಳನ್ನು ಕೂಗಿದ್ದಲ್ಲದೆ, ‘ಗುರ್ಗಾಂವ್ ಆಡಳಿತವೇ, ನಿನ್ನೆ ನಿದ್ದೆಯಿಂದ ಎದ್ದೇಳು’ ಎಂಬ ಪೋಸ್ಟರ್ಗಳನ್ನು ಹಿಡಿದುಕೊಂಡಿದ್ದರು.
ಗುರ್ಗಾಂವ್ನ ಸೆಕ್ಟರ್ 12-A ಪ್ರದೇಶದಲ್ಲಿ ಪ್ರತಿಭಟನೆ ನಡೆದಿದ್ದು, ಸುಮಾರು 30 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ, ಸ್ಥಳೀಯವಾಗಿ ಪೊಲೀಸ್ ಬಿಗಿ ಭದ್ರತೆಯನ್ನೂ ಕಲ್ಪಿಸಲಾಗಿದೆ.ಇಲ್ಲೀಗ ಎಲ್ಲವೂ ಶಾಂತಿಯುತವಾಗಿದೆ. ಇಂದು ಮುಸ್ಲಿಮರ ನಮಾಜ್ಗೆ ಅಡ್ಡಿಪಡಿಸಲು ಪ್ರತಿಭಟನೆ ನಡೆಸಿದವರನ್ನು ನಾವು ವಶಕ್ಕೆ ಪಡೆದಿದ್ದೇವೆ. ಇಂದು ಪ್ರತಿಭಟನೆ ನಡೆದವರ ಜತೆ ನಾವು ಕಳೆದ ಕೆಲವು ವಾರಗಳಿಂದಲೂ ಮಾತುಕತೆ ನಡೆಸುತ್ತ, ಗಲಾಟೆ ಮಾಡದಂತೆ ತಿಳಿವಳಿಕೆ ಹೇಳುತ್ತಲೇ ಬಂದಿದ್ದೇವೆ. ಆದರೆ ಇವತ್ತು ಕೂಡ ಅವರು ಬಯಲಿಗೆ ಇಳಿದರು.
ಹಾಗಾಗಿ ತ್ವರಿತ ಕ್ರಮ ಕೈಗೊಂಡಿದ್ದೇವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.ಸತತ ಮೂರು ವಾರಗಳಿಂದಲೂ ಗುರ್ಗಾಂವ್ನ ಈ ಪ್ರದೇಶದಲ್ಲಿ ಮುಸ್ಲಿಮರ ನಮಾಜ್ಗೆ ಅಡ್ಡಿಪಡಿಸಲಾಗುತ್ತಿದೆ. ಕಳೆದ ವಾರವಂತೂ 12-A ಸೆಕ್ಟರ್ನಲ್ಲಿ ಮುಸ್ಲಿಮರು ತಮ್ಮದೇ ಖಾಸಗಿ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆಗಲೂ ಕೂಡ ಕೆಲವರು ಅಲ್ಲಿ ಹೋಗಿ ಜೈ ಶ್ರೀರಾಮ್ ಎಂದು ಕೂಗಿದ್ದರು.
ಗುರ್ಗಾಂವ್ನ ಸೆಕ್ಟರ್ 47 ಮತ್ತು 12-ಎ ಗಳಲ್ಲಿ ಹಿಂದೂ-ಮುಸ್ಲಿಂ ಪ್ರಾರ್ಥನೆ ಜಾಗದ ವಿವಾದ ಈಗಿನಿದಲ್ಲ. 2018ರಲ್ಲಿಯೂ ಹೀಗೆ ಪ್ರತಿಭಟನೆ ನಡೆದಿತ್ತು. ಅದಾದ ಬಳಿಕ ಪ್ರತ್ಯೇಕವಾಗಿಯೇ ಸ್ಥಳಗಳನ್ನು ಗುರುತಿಸಲಾಗಿತ್ತು. ಅಷ್ಟಾದರೂ ಕೂಡ ಈಗ ಸತತ ಮೂರು ವಾರಗಳಿಂದ ಮತ್ತೆ ಪ್ರತಿಭಟನೆ, ನಮಾಜ್ಗೆ ಅಡ್ಡಿಪಡಿಸುವ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ನಿಮ್ಮ ಪ್ರಾರ್ಥನೆಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.